Connect with us

Chamarajanagar

ಚಾಮುಲ್ ನೇಮಕಾತಿ ಪ್ರಕರಣ – ಜಂಟಿ ತನಿಖೆಗೆ ಅಧಿಕಾರಿಗಳ ತಂಡ ರಚನೆ

Published

on

– ವಾರದೊಳಗೆ ವರದಿ ನೀಡಲು ಡಿಸಿ ಆದೇಶ

ಚಾಮರಾಜನಗರ: ಕುದೇರಿನ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಚಾಮುಲ್)ದಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಅವ್ಯವಹಾರದ ಕುರಿತ ತನಿಖೆಗೆ ನಾಲ್ವರು ಅಧಿಕಾರಿಗಳ ತಂಡವನ್ನು ರಚಿಸಿ, ಜಂಟಿ ತನಿಖೆ ನಡೆಸಲು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಆದೇಶಿಸಿದ್ದಾರೆ.

ಚಾಮುಲ್‍ನಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿ ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹಲವು ಸಂಘ-ಸಂಸ್ಥೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದವು. ಅಲ್ಲದೇ ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿದ್ದು, ನೇಮಕಾತಿ ಪ್ರಕ್ರಿಯೆಯ ವಿವಿಧ ಅಂಶಗಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕಿರುವ ಹಿನ್ನಲೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಸಮಾಜ ಕಲ್ಯಾಣ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರನ್ನು ಜಂಟಿ ತನಿಖೆಗೆ ನೇಮಕ ಮಾಡಲಾಗಿದೆ.

ಚಾಮುಲ್‍ನಲ್ಲಿ ಉದ್ಯೋಗ ನೇಮಕಾತಿ ಸಂಬಂಧ ನಡೆಸಲಾಗಿರುವ ಲಿಖಿತ ಪರೀಕ್ಷೆ, ಸಂದರ್ಶನ, ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಕೆ ಹಾಗೂ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿರುವ ಕುರಿತು ಜಂಟಿ ತನಿಖೆ ತಂಡಕ್ಕೆ ಮಾಹಿತಿ ನೀಡಬೇಕು.

ಪರಿಶೀಲನೆಗಾಗಿ ನೇಮಕಾತಿ ನಿಯಮ, ಸರ್ಕಾರದ ಆದೇಶಗಳು ಹಾಗೂ ಅಗತ್ಯ ದಾಖಲೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಜೊತೆಗೆ ಅಧಿಕಾರಿಗಳ ತನಿಖಾ ತಂಡವು ಜಂಟಿಯಾಗಿ ತನಿಖೆ ನಡೆಸಿ, ಒಂದು ವಾರದೊಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಆದೇಶಿಸಿದ್ದಾರೆ.

Click to comment

Leave a Reply

Your email address will not be published. Required fields are marked *