ಚಾಮರಾಜನಗರ: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.
ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ (55) ಹುಲಿದಾಳಿಗೆ ಬಲಿಯಾಗಿದ್ದಾರೆ. ಎತ್ತುಗಳೊಂದಿಗೆ ಕಾಡಂಚಿನಲ್ಲಿ ಬರುತ್ತಿದ್ದಾಗ ಹುಲಿ ದಾಳಿ ಮಾಡಿದೆ.
ಎತ್ತುಗಳನ್ನು ಹೊಡೆದುಕೊಂಡು ಕಾಡಿನಲ್ಲಿ ಬರುತ್ತಿದ್ದ ಶಿವಮಾದಯ್ಯ ಮೇಲೆ ಹುಲಿ ದಾಳಿ ಮಾಡಿದೆ. ಇದರಿಂದ ಭಯಗೊಂಡ ಎತ್ತುಗಳು ಓಡಿಹೋಗಿ ಮನೆ ಸೇರಿವೆ. ಶಿವಮಾದಯ್ಯ ಇಲ್ಲದೇ ಕೇವಲ ಎತ್ತುಗಳೇ ಬಂದಿರುವುದರಿಂದ ಗಾಬರಿಗೊಂಡ ಗ್ರಾಮಸ್ಥರು ರೈತನನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಕಾಡಿನಲ್ಲಿ ಮೈಮೇಲೆ ಹುಲಿ ದಾಳಿಯ ಗಾಯಗಳಿಂದ ಕೂಡಿದ ಶಿವಮಾದಯ್ಯನ ಶವ ಪತ್ತೆಯಾಗಿದೆ.