ಚಾಮರಾಜನಗರ: ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಇದು ದೋಸ್ತಿ ಸರ್ಕಾರ ಅಲ್ಲ, ಇದು ದುಷ್ಮನ್ ಸರ್ಕಾರ ಎಂದು ಸಂಸದ ಶ್ರೀನಿವಾಸ್‍ಪ್ರಸಾದ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಒಳಗೊಳಗೆ ಅಸಮಾಧಾನವಿದೆ. ಎಚ್ ವಿಶ್ವನಾಥ್ ಅವರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನವಿತ್ತು. ಈ ಹಿಂದೆ ಅವರು `ಹಳ್ಳಿ ಹಕ್ಕಿ’ ಎಂಬ ಪುಸ್ತಕ ಬರೆದಿದ್ದರು. ಈಗ ಜೆಡಿಎಸ್ ಜೊತೆ ಇದ್ದ ಅನುಭವವನ್ನು `ಹಳ್ಳಿ ಹಕ್ಕಿಯ ಗೋಳು’ ಎಂದು ಬರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮಧ್ಯಂತರ ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಬೇಕಿದ್ದರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಈ ಬಗ್ಗೆ ಈಗಾಗಲೇ ಯಡಿಯೂರಪ್ಪ ಅವರು ಹೇಳಿದ್ದಾರೆ. ಸರ್ಕಾರ ಏನ್ ಆಗುತ್ತದೆ ಎಂದು ಮಂಗಳವಾರದವರೆಗೆ ಕಾದು ನೋಡಬೇಕಿದೆ. ಮುಖ್ಯಮಂತ್ರಿ ಅವರು ಕೂಡ ಸ್ಪೀಕರ್ ಬಳಿ ಟೈಮ್ ಕೇಳಿದ್ದಾರೆ. ಏನಾಗುತ್ತೆ ನೋಡಬೇಕು ಎಂದು ಹೇಳಿದರು.
ಈಗಾಗಲೇ ಎಲ್ಲರೂ ಕೂಡ ರೆಸಾರ್ಟ್ ನಲ್ಲಿ ಇದ್ದಾರೆ. ಈ ರೀತಿಯ ಸ್ಥಿತಿ ಕರ್ನಾಟಕದಲ್ಲಿ ಬಂದಿರುವುದು ನಮ್ಮ ದೌರ್ಭಾಗ್ಯ. ಇಂತಹ ಬೆಳವಣಿಗೆಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.