ಚಾಮರಾಜನಗರ: ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರನ್ನು ಪೈಸೆ ಲೆಕ್ಕದಲ್ಲಿ ಹರಾಜು ಹಾಕಲಾಗಿದೆ. ಜನರ ಹಿತಾಸಕ್ತಿ ಮರೆತು ರಾಜಕೀಯ ದೊಂಬರಾಟದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ನಾಯಕರಿಗೆ ಜನ ಥೂ ಎಂದು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಅವರ ಭಾವಚಿತ್ರಗಳಿಗೆ ಚಪ್ಪಲಿ, ಪೊರಕೆಗಳಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಅಸಹ್ಯ ರಾಜಕೀಯ ಬೆಳವಣಿಗೆಯ ಬಗ್ಗೆ ಚಾಮರಾಜನಗರದಲ್ಲಿ ರೈತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಭೀಕರ ಬರ ಇದ್ದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಧಿಕಾರಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿ ನಗರದ ಭುವನೇಶ್ವರಿ ವೃತ್ತದಲ್ಲಿ ಶಾಸಕರನ್ನು ಪೈಸೆ ಲೆಕ್ಕದಲ್ಲಿ ಹರಾಜು ಹಾಕುವ ಅಣುಕು ಪ್ರದರ್ಶನ ನಡೆಸಿದರು.
ಮುಖ್ಯಮಂತ್ರಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಭಾವಚಿತ್ರಗಳಿಗೆ ಕ್ಯಾಕರಿಸಿ ಉಗಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಚಪ್ಪಲಿ ಹಾಗೂ ಪೊರಕೆಗಳಿಂದ ಹೊಡೆದು, ನಗರದ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.