ಚಾಮರಾಜನಗರ: ಶ್ರೀ ಮಲೆ ಮಾದಪ್ಪನಿಗೆ ಭಕ್ತರು ಹರಕೆ ರೂಪದಲ್ಲಿ ನೀಡುವ ಹಸು ಹಾಗೂ ಕರುಗಳನ್ನು ಕಸಾಯಿಖಾನೆಗೆ ಸಾಗಣೆ ಮಾಡುವ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ.
ಮೂರು ಲಾರಿಗಳಲ್ಲಿ ಶುಕ್ರವಾರ ರಾತ್ರಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಆರೋಪಿಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಲಾರಿಗಳಲ್ಲಿ ಹಸುಗಳನ್ನು ತಮಿಳುನಾಡು ಮಾರ್ಗವಾಗಿ ಕೇರಳಕ್ಕೆ ಸಾಗಿಸುವ ಯತ್ನ ನಡೆದಿತ್ತು ಎನ್ನಲಾಗಿದೆ.
Advertisement
ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಪದೇ ಪದೇ ಇಂತಹ ಘಟನೆ ಮರುಕಳಿಸುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಜಾನುವಾರುಗಳ ಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
Advertisement
ನಮ್ಮ ಮನೆ ಸಾಲೂರು ಮಠದ ರಸ್ತೆಯಲ್ಲಿದೆ. ಮನೆ ಮುಂದಿನ ರಸ್ತೆಯಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ನೋಡಿದ ತಕ್ಷಣವೇ ಮಗಳು ನನ್ನ ಗಮಕ್ಕೆ ತಂದಳು. ನಾನು ಲಾರಿಯನ್ನು ಹಿಂಬಾಲಿಸಿ, ತಡೆದೆ. ಆದರೆ ಮಲೆ ಮಹದೇಶ್ವರ ದೇವಸ್ಥಾನದ ಸಿಬ್ಬಂದಿ ಕರಿಯಪ್ಪ ಲಾರಿಯನ್ನು ವಾಪಸ್ ಮಠಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ನಾನು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಬಳಿಕ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದೆ. ಅವರು ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯರಾದ ರಮೇಶ್ ಆರೋಪಿಸಿದ್ದಾರೆ.
Advertisement
ಮಠದಿಂದ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವುದು ಇದೇ ಮೊದಲೇನಲ್ಲ. ಸುಮಾರು ಎರಡು ಮೂರು ವರ್ಷಗಳಿಂದ ಈ ರೀತಿಯ ಹಸು ಮಾರಾಟ ನಡೆಯುತ್ತಿದೆ. ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಬೇಕು ಎಂದು ರಮೇಶ್ ಒತ್ತಾಯಿಸಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಜನರು ಮಲೆ ಮಹದೇಶ್ವರನ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಅವರು ಅಂದುಕೊಂಡ ಕೆಲಸವಾದಾಗ ಇಲ್ಲಿಗೆ ಬಂದು ದೇವರಿಗೆ ಹರಕೆ ರೂಪದಲ್ಲಿ ಹಸುಗಳನ್ನು ನೀಡುತ್ತಾರೆ. ಆದರೆ ಅವುಗಳನ್ನು ಕಸಾಯಿಖಾನೆಗೆ ಸಾಗಿಸಿ, ಭಕ್ತರ ನಂಬಿಕೆಗೆ ಕಳಂಕ ತರುತ್ತಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.