– ಮಹಿಳೆಯರಿಂದಲೇ ಕಳ್ಳಭಟ್ಟಿ ದಂಧೆ
ಚಾಮರಾಜನಗರ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿರುವುರದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತಿದೆ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೆಡೆ ಮಹಿಳೆಯರೇ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೀಗೆ ಬಿಟ್ಟರೆ ಅಪಾಯ ಎದುರಾಗಲಿದ್ದು, ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಮದ್ಯದಂಗಡಿ ಮುಚ್ಚಿರುವುದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಖೋತಾ ಆಗುತ್ತಿದೆ. ಅಲ್ಲದೆ ಮದ್ಯ ಮಾರಾಟದ ಕಳ್ಳದಂಧೆ ನಡೆಯುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಾರಕ್ಕೊಮ್ಮೆ ಮದ್ಯದಂಗಡಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳ್ಳದಾರಿಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಮದ್ಯದಂಗಡಿಗಳು ಮುಚ್ಚಿದ್ದರೂ ಹೇಗೆ ಮದ್ಯ ಮಾರಾಟ ಆಗುತ್ತಿದೆ. ಒಂದಕ್ಕೆ ಹತ್ತು ಪಟ್ಟು ಹಣ ನೀಡಿ ಜನ ಮದ್ಯ ಸೇವಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾಳಸಂತೆಯಲ್ಲಿ ಲೋಕಲ್ ಮದ್ಯಕ್ಕೂ 500, 600 ರೂಪಾಯಿಗಳಾಗಿದೆ. ಮದ್ಯದಂಗಡಿಗಳನ್ನು ಬಂದ್ ಮಾಡಿದ್ದ ಮೇಲೆ ಕಾಳಸಂತೆಯಲ್ಲಿ ಹೇಗೆ ದೊರೆಯುತ್ತಿದೆ? ಬಂದ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆಯೇ? ನಿಯಮಾನುಸಾರ ಸೀಲ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.