ಚಾಮರಾಜನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ 13 ಮಂದಿ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಇದೀಗ ಹೆಚ್ ವಿಶ್ವನಾಥ್ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ.
ಹೌದು, ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೆ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅಲ್ಲದೆ ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಬರಹ ಬರೆದಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ರಾಜೀನಾಮೆ ನೀಡಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಇನ್ನೊಂದೆಡೆ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬೆಂಕಿ ಬಿದ್ದಿದ್ದರೆ, ಜೆಡಿಎಸ್ ಕಾರ್ಯಕರ್ತರಿಗೆ ಮರುಚುನಾವಣೆ ಬಗ್ಗೆ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಮತ್ತು ಜಿಡಿ ಹರೀಶ್ ಗೌಡರ ಹೆಸರು ಪ್ರಸ್ತಾಪವಾಗುತ್ತಿದೆ. ಹುಣಸೂರಿಗೆ ಜಿಡಿ ಹರೀಶ್ ಗೌಡ ಮತ್ತು ಕೆಆರ್ ಪೇಟೆಗೆ ನಿಖಿಲ್ ಹೆಸರನ್ನು ಕಾರ್ಯಕರ್ತರು ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ ಶಾಸಕರ ರಾಜೀನಾಮೆ ಬೆನ್ನಲ್ಲೇ ವಾಟ್ಸಪ್ ನಲ್ಲಿ ನಿಖಿಲ್ ಮತ್ತು ಜಿಡಿ ಹರೀಶ್ ಗೌಡ ಪರ ಕಾರ್ಯಕರ್ತರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೇಂದ್ರ ಬಜೆಟ್ ಮರುದಿನವೇ ಜೆಡಿಎಸ್‍ನ ಮೂವರು ಹಾಗೂ ಕಾಂಗ್ರೆಸ್ ನ 10 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಯ ಪತ್ರದೊಂದಿಗೆ ಸ್ಪೀಕರ್ ಗೆ ಕಚೇರಿಗೆ ತೆರಳಿದಾಗ ಅಲ್ಲಿ ಸ್ಪೀಕರ್ ಇರಲಿಲ್ಲ. ಹೀಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಬಳಿಕ ಅತೃಪ್ತ ಶಾಸಕರೆಲ್ಲರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕೂಡ ಉಪಸ್ಥಿತರಿದ್ದರು.
ಮುನಿರತ್ನ, ರಾಮಲಿಂಗಾರೆಡ್ಡಿ ಹಾಗೂ ಆನಂದ್ ಸಿಂಗ್ ಹೊರತು ಪಡಿಸಿ ಉಳಿದೆಲ್ಲ ಅತೃಪ್ತ ಶಾಸಕರು ಮುಂಬೈ ಹೊಟೇಲಿನಲ್ಲಿ ತಂಗಿದ್ದಾರೆ. ಇವರ ಜೊತೆಯಲ್ಲಿ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ, ಬಿಎಸ್‍ವೈ ಪಿಎ ಸಂತೋಷ್ ಇದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಇತ್ತ ಅಮೆರಿಕಗೆ ತೆರಳಿರುವ ಸಿಎಂ ಅವರು ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.