ಚಾಮರಾಜನಗರ: ಇಲ್ಲಿನ ಚಂಗಡಿ ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ರಸ್ತೆ ಸಂಪರ್ಕವೂ ಇಲ್ಲ. ಯಾರಿಗಾದರೂ ಆರೋಗ್ಯ ಕೆಟ್ಟರೆ ಅಷ್ಟೇ. ಹೀಗಾಗಿ ಈ ಗ್ರಾಮದ ಸಮಸ್ಯೆಗಳ ಆಗರವಾಗಿದೆ.
ಹೌದು. ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಧಾಮದ ದಟ್ಟಾರಣ್ಯದ ಮಧ್ಯೆ ಇರೋ ಚಂಗಡಿ ಗ್ರಾಮಸ್ಥರು ಡಾಂಬರ್ ರಸ್ತೆನೇ ನೋಡಿಲ್ಲ. ಕಿತ್ತೋದ ಹಾಳು ಮೂಳು ರಸ್ತೆಯೇ ಇವರಿಗೆ ಗತಿ. ಸರಿಯಾದ ರಸ್ತೆ ಸಂಪರ್ಕ ಇಲ್ಲದೇ ಬೇಸತ್ತು ಹೋಗಿದ್ದಾರೆ. ಈ ಗ್ರಾಮಕ್ಕೆ ಹೋಗಬೇಕಾದರೆ ಮುಖ್ಯರಸ್ತೆಯಿಂದ ಅರಣ್ಯದ ನಡುವೆ ಕಾಲುದಾರಿಯಲ್ಲಿ ಬರೋಬ್ಬರಿ 16 ಕಿ.ಮೀ ಸಾಗಬೇಕು. ಯಾರಿಗಾದ್ರೂ ಆರೋಗ್ಯ ಕೆಟ್ಟರೆ ಅಥವಾ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಅವರನ್ನು ಜೋಲಿಯಲ್ಲಿ ಕಟ್ಟಿಕೊಂಡು ಕಾಡಿನ ಮಧ್ಯೆ 22 ಕಿಲೋ ಮೀಟರ್ ದೂರ ಆಸ್ಪತ್ರೆಗೆ ಹೊತ್ತುಕೊಂಡು ಹೋಗಬೇಕು ಎಂದು ಗ್ರಾಮಸ್ಥ ಕರಿಯಪ್ಪ ಹೇಳಿದ್ದಾರೆ.
Advertisement
Advertisement
ಚಂಗಡಿ ಗ್ರಾಮಸ್ಥರ ಸಮಸ್ಯೆ ಇಲ್ಲಿಗೆ ಮುಗಿದಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಇರುವ ಈ ಗ್ರಾಮಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ. ಅಲ್ಲದೆ ಈ ಗ್ರಾಮದ ಹೆಣ್ಣುಮಕ್ಕಳನ್ನು ಯಾರೂ ಮದುವೆಯಾಗಲು ಮುಂದೆ ಬರುತ್ತಿಲ್ಲ. ಚಂಗಡಿ ಗ್ರಾಮದಲ್ಲಿ 195 ಕುಟುಂಬಗಳಿವೆ. 1200ಕ್ಕೂ ಹೆಚ್ಚು ಜನಸಂಖ್ಯೆಯಿದೆ. ವ್ಯವಸಾಯವೇ ಇವರ ಮೂಲ ಕಸುಬು. ಬೆಳೆ ಬೆಳೆದರೂ ವನ್ಯಪ್ರಾಣಿಗಳ ಉಪಟಳದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ. ಇದರಿಂದ ಬೇಸತ್ತಿರೋ ಗ್ರಾಮಸ್ಥರು ಅರಣ್ಯದಿಂದ ಹೊರಬರಲು ಸಿದ್ಧರಾಗಿದ್ದಾರೆ. ಆದರೆ ಸರ್ಕಾರ ಮಾತ್ರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಿದೆ.
Advertisement
Advertisement
ಬೇರೆ ಬೇರೆ ಕಡೆ ಹುಲಿರಕ್ಷಿತಾರಣ್ಯ ಹಾಗೂ ವನ್ಯಧಾಮಗಳಿಂದ ಅರಣ್ಯವಾಸಿಗಳನ್ನು ಹೊರತರಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಆದರೆ ಅಲ್ಲಿನ ಅರಣ್ಯವಾಸಿಗಳು ಅರಣ್ಯದಿಂದ ಬರಲು ಒಪ್ಪುತ್ತಿಲ್ಲ. ದಟ್ಟಾರಣ್ಯದ ಮಧ್ಯೆ ಇರುವ ಚಂಗಡಿ ಗ್ರಾಮಸ್ಥರು ತಾವಾಗಿಯೇ ಹೊರಬರಲು ಒಪ್ಪಿಗೆ ಸೂಚಿಸಿದ್ದರೂ ಸರ್ಕಾರ ಮಾತ್ರ ಅವರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸವಾಗಿದೆ.