ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಭರ್ಜರಿ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಪ್ರಚಾರಕ್ಕಿಳಿದಿದ್ದಾರೆ. ಇದೇ ವೇಳೆ ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ ಎಂದು ಹೇಳಿದ್ದಾರೆ.
ಸಿವಿ ರಾಮನ್ ನಗರದಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮಗಳ ಮಾತನಾಡಿದ ದರ್ಶನ್, “ನಾನು ಮೊದಲನೇ ಬಾರಿಗೆ ಪಿಸಿ ಮೋಹನ್ ಪರ ಪ್ರಚಾರ ಮಾಡುತ್ತಿಲ್ಲ. ಪಿಸಿ ಮೋಹನ್ ನನಗೆ 15 ವರ್ಷದಿಂದ ಸ್ನೇಹಿತರು. ನಾನು ಈ ಹಿಂದೆ ಕೂಡ ಪ್ರಚಾರ ಮಾಡಿದ್ದೆ. ಈಗ ಕೂಡ ಪ್ರಚಾರ ಮಾಡುತ್ತಿದ್ದೇನೆ. ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ನಾನು ವ್ಯಕ್ತಿ ನೋಡಿ ಪ್ರಚಾರಕ್ಕೆ ಹೋಗುತ್ತೇನೆ” ಎಂದು ಹೇಳಿದ್ದಾರೆ.
ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ. ಏಕೆಂದರೆ ನಮ್ಮ ಮನೆಗೆ ಹಾರ್ಟ್ ಆಪರೇಶನ್, ಬೇರೆ ಆಪರೇಶನ್‍ಗೆ ಹಣ ನೀಡಿ ಎಂದು ಜನರು ಕೇಳಿಕೊಂಡು ಬರುತ್ತಾರೆ. ಆಗ ಎಂಪಿ, ಎಂಎಲ್‍ಎ ಅವರಿಂದ ಪತ್ರ ಬಯಸುತ್ತೇನೆ. ಅವರ ಪತ್ರದಿಂದ ಆಸ್ಪತ್ರೆಗಳು ವೈದ್ಯಕೀಯ ಶುಲ್ಕವನ್ನು ಸ್ವಲ್ಪ ಕಡಿಮೆ ಮಾಡಿ ಚಿಕಿತ್ಸೆ ನೀಡುತ್ತವೆ. ಆಪರೇಶನ್‍ಗೆ ಒಂದು ಲಕ್ಷ ರೂ. ಇದ್ದರೆ, ಪತ್ರ ನೋಡಿ 30 ಸಾವಿರ ಕಡಿಮೆ ಮಾಡುತ್ತಾರೆ. ಉಳಿದ ಹಣವನ್ನು ನಾನು ನೀಡಿ ರೋಗಿಗಳಿಗೆ ಸಹಾಯ ಮಾಡುತ್ತೇನೆ” ಎಂದರು.
ಮಂಗಳವಾರ ನಾನು ಮಂಡ್ಯಕ್ಕೆ ಹೋಗುತ್ತೇನೆ. ಜನರು ಎಳೆದಾಡುವಾಗ ಕೈ ಸ್ವಲ್ಪ ನೋವಾಗಿದೆ. ಬೆಂಗಳೂರಿನಲ್ಲಿ ಸದ್ಯ ಪಿಸಿ ಮೋಹನ್ ಬಿಟ್ಟರೆ ಯಾರ ಪರವಾಗಿ ಪ್ರಚಾರ ಮಾಡುವುದಿಲ್ಲ. ಮತ್ತೆ 13ರಂದು ನಾನು ಪಿಸಿ ಮೋಹನ್ ಪರ ಪ್ರಚಾರಕ್ಕೆ ಬರುತ್ತೇನೆ ಎಂದು ದರ್ಶನ್ ತಿಳಿಸಿದರು.
ಇಂದು ಸಂಜೆ ಮತ್ತೆ ದರ್ಶನ್ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಶಾಂತಿನಗರ ಬಸ್ ಸ್ಟ್ಯಾಂಡ್‍ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಪಿಸಿ ಮೋಹನ್ ಪರ ದರ್ಶನ್ ಜೊತೆ ಸಂಸದ ರಾಜೀವ್ ಚಂದ್ರಶೇಖರ್, ನಟಿ ತಾರಾ ಅನುರಾಧ ಭಾಗಿಯಾಗಲಿದ್ದಾರೆ.