ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

Public TV
2 Min Read
Darshan Still

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರವಾದ ಪ್ರಾಣಿ ಪ್ರಿಯರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಬಗ್ಗೆ ಅವರ ಅಭಿಮಾನಿಗಳಿಗೆ ಇಂಚಿಂಚಾಗಿ ಗೊತ್ತಿದೆ. ಇದೀಗ ಅಭಿಮಾನಿಗಳಿಗೆಲ್ಲ ಹೆಮ್ಮೆ ಪಡುವಂಥಾದ್ದೊಂದು ಕೆಲಸಕ್ಕೆ ದರ್ಶನ್ ಕೈ ಹಾಕಿದ್ದಾರೆ. ಜೂನ್ ಐದರಂದು ವಿಶ್ವ ಪರಿಸರ ದಿನ ಇತ್ತಲ್ಲಾ? ಆ ಹಿನ್ನೆಲೆಯಲ್ಲಿ ಮರಗಿಡಗಳನ್ನು ಕಾಪಾಡಿಕೊಳ್ಳುವ ಅರಣ್ಯ ಇಲಾಖೆಯ ಅಭಿಯಾನಕ್ಕೆ ದರ್ಶನ್ ಅವರು ಸಾಥ್ ಕೊಟ್ಟಿದ್ದರು!

ಸಿನಿಮಾಗಳಾಚೆಗೆ ಬೇರೆ ಕಾರ್ಯಕ್ರಮ ಮತ್ತು ಚಟುವಟಿಕೆಗಳಿಗೆ ದರ್ಶನ್ ಅವರನ್ನು ಕರೆಸುವುದೆಂದರೆ ಸವಾಲಿನ ಸಂಗತಿ. ಅವರು ಸಿನಿಮಾ ಬಿಟ್ಟರೆ ಬೇರ್ಯಾವುದರತ್ತಲೂ ಹೆಚ್ಚಾಗಿ ಗಮನ ಹರಿಸುವವರಲ್ಲ. ಆದರೆ ರಾಜ್ಯ ಅರಣ್ಯ ಇಲಾಖೆ ಪರಿಸರ ಜಾಗೃತಿಯ ಕಾಳಜಿಯೊಂದಿಗೆ ಇಂಥಾದ್ದೊಂದು ಪ್ರಪೋಸಲ್ ಮುಂದಿಟ್ಟಾಗ ಒಪ್ಪಿಕೊಂಡು ರಾಯಭಾರಿಯಾಗಿದ್ದರು. ಅದಕ್ಕೆ ಕಾರಣ ಅವರೊಳಗಿರುವ ಅಸೀಮ ಪರಿಸರ ಪ್ರೇಮ. ತಮ್ಮ ಅಭಿಮಾನಿಗಳನ್ನು ಸದಾ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಪ್ರೇರೇಪಿಸುತ್ತಲೇ ಬಂದಿರುವ ದರ್ಶನ್ ತಾವು ಪರಿಸರ ಕಾಳಜಿಯ ಬಗ್ಗೆ ಮಾತಾಡಿದರೆ ಖಂಡಿತಾ ತಮ್ಮ ಅಭಿಮಾನಿಗಳು ಅದರತ್ತ ಗಮನ ಹರಿಸಿ ಕಾರ್ಯಗತರಾಗುತ್ತಾರೆಂಬ ನಂಬಿಕೆಯಿಂದಲೇ ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.

ಆರಂಭಿಕ ಹಂತದಲ್ಲೇ ಅದು ಫಲಪ್ರದವಾಗಿದೆ. ಮೊನ್ನೆ ಜೂನ್ 8ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಫೀಷಿಯಲ್ ಫ್ಯಾನ್ಸ್ ಅಸೋಸಿಯೇಷನ್ ಆದ ‘ಡಿ ಕಂಪೆನಿ’ಗೆ ಏಳು ವರ್ಷ ತುಂಬಿತು. ಈ ಸಂದರ್ಭದಲ್ಲಿ ಡಿ ಕಂಪೆನಿಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದರ್ಶನ್ ಅವರ ಪ್ರತಿಯೊಬ್ಬ ಅಭಿಮಾನಿಯೂ ತಲಾ ಒಂದೊಂದು ಗಿಡ ನೆಡಬೇಕು ಅನ್ನೋದು ಡಿ ಕಂಪೆನಿಯ ಉದ್ದೇಶವಾಗಿತ್ತು. ಈ ಕಾರಣದಿಂದ ಆರಂಭವಾದ ಗಿಡನೆಡುವ ಅಭಿಯಾನ ಈಗ ರಾಜ್ಯವ್ಯಾಪಿ ಯಶಸ್ವಿಯಾಗಿ ನೆರೆವೇರುತ್ತಿದೆ.

ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ದರ್ಶನ್ ಅವರಿಗೆ ಅಭಿಮಾನಿಗಳಿಲ್ಲದ ಭೂಭಾಗ ಕರ್ನಾಟಕದಲ್ಲಿಲ್ಲ ಎಂಬ ಮಾತಿದೆ. ಅಂಥಾ ಅಭಿಮಾನಿಗಳೆಲ್ಲ ಒಂದೊಂದು ಗಿಡ ನೆಟ್ಟರೂ, ಪರಿಸರದ ಬಗ್ಗೆ ಕಾಳಜಿ ಹೊಂದಿದರೂ ಕರ್ನಾಟಕದ ಅರಣ್ಯ ಸಂಪತ್ತು ಹೆಚ್ಚುತ್ತದೆ. ಅದರಿಂದ ಇನ್ನೊಂದಷ್ಟು ಮಂದಿ ಖಂಡಿತಾ ಸ್ಫೂರ್ತಿ ಹೊಂದುತ್ತಾರೆ. ನಿಜವಾಗಿಯೂ ದರ್ಶನ್ ಅಭಿಮಾನಿಗಳ ಜೊತೆ ಎಲ್ಲರೂ ಸೇರಿ ಇದೇ ರೀತಿ ಮನಸ್ಸು ಮಾಡಿದರೆ ಕರ್ನಾಟಕವೂ ಹಸಿರಿನಿಂದ ನಳನಳಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *