ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಹುಡುಗ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ ಟಕ್ಕರ್ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.
ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಮನೋಜ್ ಬೇರೆ ಯಾರೂ ಅಲ್ಲ. ನನ್ನ ಅಕ್ಕನ ಮಗ. ನಮ್ಮ ದೊಡ್ಡಪ್ಪನ ಮೊಮ್ಮಗ. ನನ್ನ ಜೊತೆ ಅಂಬರೀಶ ಹಾಗೂ ಚಕ್ರವರ್ತಿ ಚಿತ್ರಗಳಲ್ಲಿ ಆ್ಯಕ್ಟ್ ಮಾಡಿದ್ದಾನೆ. ಸಿನಿಮಾರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಈ ಸಿನಿಮಾದಲ್ಲಿ ಒಳ್ಳೇ ಕಂಟೆಂಟ್ ಇದೆ. ಟೀಸರ್‍ನಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತಿದೆ. ಈ ಚಿತ್ರದ ನಿರ್ಮಾಪಕರಾದ ನಾಗೇಶ್ ಅವರು ಸಾಕಷ್ಟು ಸಿನಿಮಾಗಳ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಕೊರಿಯೋಗ್ರಾಫರ್ ಮೋಹನ್ ಕಸದಲ್ಲೂ ರಸ ತೆಗೆಯೋ ವ್ಯಕ್ತಿ. ಮಲೇಶಿಯಾದಲ್ಲಿ ಶೂಟ್ ಮಾಡಿರುವ ಡ್ಯೂಯೆಟ್ ಸಾಂಗನ್ನು ಬರೀ ಎರಡು ದಿನಗಳಲ್ಲಿ ಎಷ್ಟು ಅದ್ಭುತವಾಗಿ ಮಾಡಿಕೊಟ್ಟಿದ್ದಾನೆ. ಮನೋಜ್ ಕೂಡಾ ಸ್ಕ್ರೀನ್ ಮೇಲೆ ತುಂಬಾ ಚೆನ್ನಾಗಿ ಕಾಣುತ್ತಿದ್ದಾನೆ” ಎಂದರು.
Advertisement
Advertisement
ಕೆ.ಎನ್.ನಾಗೇಶ್ ಕೋಗಿಲು ಅವರ ನಿರ್ಮಾಣದ ಈ ಚಿತ್ರಕ್ಕೆ ವಿ.ರಘುಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ಮನೋಜ್‍ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ರಘುಶಾಸ್ತ್ರಿ ಮಾತನಾಡಿ, ‘ರನ್ ಆಂಟನಿ’ ನಂತರ ನಾನು ರೆಡಿ ಮಾಡಿಕೊಂಡಿದ್ದ ಕಥೆಯಿದು. ಚಿತ್ರಕ್ಕೆ 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಮೂರು ಷೆಡ್ಯೂಲ್‍ನಲ್ಲಿ ಚಿತ್ರೀಕರಿಸಿದ್ದೇವೆ. ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಕಾನ್ಸೆಪ್ಟ್. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಕದ್ರಿ ಮಣಿಕಾಂತ್ ಅವರು ಚಿತ್ರಕ್ಕೆ ಪಕ್ಕಾ ಮಾಸ್ ಮತ್ತು ಮೆಲೋಡಿ ಟ್ಯೂನ್ ಕೊಟ್ಟಿದ್ದಾರೆ. ವಿಲನ್ ಆಗಿ ಭಜರಂಗಿ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. 30 ನಿಮಿಷಗಳ ಗ್ರಾಫಿಕ್ಸ್ ಕೂಡ ಇದರಲ್ಲಿದೆ. ಟಕ್ಕರ್ ಎಂದರೆ ಪಾಸಿಟಿವ್ ಹಾಗೂ ನೆಗಟಿವ್ ಎರಡೂ ಅರ್ಥವಿದ್ದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷಣೆ ಈ ಚಿತ್ರದಲ್ಲಿದೆ. ಲವ್ ಸ್ಟೋರಿ ಜೊತೆಗೆ ಆಕ್ಷನ್ ಪ್ಯಾಕ್ ಇರುವ ಚಿತ್ರ ಎಂದರು.
Advertisement
Advertisement
ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡಿ, ಹುಲಿರಾಯ ನಂತರ ನಮ್ಮ ಬ್ಯಾನರ್‍ನ ಎರಡನೇ ಚಿತ್ರ. ಸೋಷಿಯಲ್ ಮೀಡಿಯಾಗಳಿಂದಾಗುವ ಅವಘಡಗಳ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್ ಹಾಗೂ ರಘುಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ ಎಂದು ಹೇಳಿದರು.
ನಾಯಕ ಮನೋಜ್‍ಕುಮಾರ್ ಮಾತನಾಡಿ, ಇದೊಂದು ನಾರ್ಮಲ್ ಕಥೆ. ಸೈಬರ್ ಕ್ರೈಮ್ ವಿಷಯ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಕಮರ್ಷಿಯಲ್ ಆಗಿ ಚಿತ್ರವನ್ನು ಹೇಳಬೇಕೆಂದು ಐದು ಫೈಟ್ಸ್ ಇಟ್ಟಿದ್ದೇವೆ. ಈ ಚಿತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತೀ ಹಂತದಲ್ಲೂ ದರ್ಶನ್ ಮತ್ತು ದಿನಕರ್ ಅವರು ನೀಡುತ್ತಾ ಬಂದಿರುವ ಮಾರ್ಗದರ್ಶನಕ್ಕೆ ಟಕ್ಕರ್ ತಂಡ ಅಭಾರಿಯಾಗಿದೆ ಎಂದರು.
ನಾಯಕಿ ರಂಜನಿ ರಾಘವನ್ ಮಾತನಾಡಿ ಇದು ನನ್ನ ಎರಡನೇ ಚಿತ್ರ, ಎಂಬಿಬಿಎಸ್ ಓದುತ್ತಿರುವ ಮೆಡಿಕಲ್ ಸ್ಟೂಡೆಂಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ ಎಂದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮಾತನಾಡಿ ನಾನು ಕಮರ್ಷಿಯಲ್ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದಾಗ ರಘು ಈ ಸಿನಿಮಾ ಮ್ಯೂಸಿಕ್ ಮಾಡಲು ಕರೆದರು. ರಘು ಜೊತೆ ಇದು ಎರಡನೇ ಸಿನಿಮಾ. ಹೀರೋ ಇಂಟ್ರಡಕ್ಷನ್ ಸಾಂಗನ್ನು ಶಶಾಂಕ್ ಶೇಷಗಿರಿ ಅದ್ಭುತವಾಗಿ ಹಾಡಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧ ಭಟ್ ಹಾಗೂ ಮೋಟಿವೇಷನಲ್ ಸಾಂಗನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ ಎಂದು ಹೇಳಿಕೊಂಡರು.
ಖಳನಾಯಕ ಭಜರಂಗಿ ಲೋಕಿ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅಶ್ವಥ್ ಗುರೂಜಿ, ಕೆಪಿ.ನಾಗರಾಜ್, ಅರವಿಂದ್ ಕೌಶಿಕ್, ಗಾಯಕ ಶಶಾಂಕ್ ಶೇಷಗಿರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.