ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯದ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಕೆಆರ್‍ಎಸ್ ಅರಳಿಕಟ್ಟೆಗೆ ದರ್ಶನ್ ಆಗಮಿಸಿದಾಗ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ದರ್ಶನ್, ರೆಬಲ್ ಸ್ಟಾರ್ ಅಂಬರೀಶ್ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸುಮಲತಾ ಪರ ಪ್ರಚಾರವನ್ನು ಆರಂಭಿಸಿದರು.
ಇದೇ ವೇಳೆ ಮಾತನಾಡಿದ ಅವರು, ಇಲ್ಲಿ ಊರಲ್ಲಿ ಎಲ್ಲರು ತಂಬಿಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ನನ್ನ ಬಾಯಲ್ಲಿ ನೀರು ಬರುತ್ತಿತ್ತು ಹಾಗೂ ತಿನ್ನಬೇಕು ಅಂತಾ ಆಸೆ ಆಗುತಿತ್ತು. ಹೀಗಾಗಿ ನನಗೂ ತಂಬಿಟ್ಟು ಕೊಡಿ ತಿಂದುಕೊಂಡು ಹೋಗುತ್ತೇನೆ ಎಂದು ದರ್ಶನ್ ಗ್ರಾಮಸ್ಥರಲ್ಲಿ ಕೇಳಿಕೊಂಡರು. ದರ್ಶನ್ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ತಂಬಿಟ್ಟು ಕೊಟ್ಟಿದ್ದಾರೆ. ದರ್ಶನ್ ತಂಬಿಟ್ಟು ತಿಂದು ಬಾಯಿ ಸಿಹಿ ಮಾಡಿಕೊಂಡಿದ್ದಾರೆ.
ತಂದೆ, ತಾಯಿ ಸಮಾನ ಎಲ್ಲಾ ಗುರು ಹಿರಿಯರಿಗೆ ನಮಸ್ಕಾರ ಮಾಡಿ, ಯಾರು ಯಾರು ಏನು ಮಾತನಾಡಿದರೂ ಅದಕ್ಕೆ ನೀವೂ ಉತ್ತರ ಕೊಡ್ಬೇಕು ಎಂದು ದರ್ಶನ್ ಹೇಳಿದರು. ಅಂಬರೀಶ್ ಮಾಡಿದ ಕೆಲಸ ಮುಂದುವರಿಸಲು ಸುಮಲತಾ ಬಂದಿದ್ದಾರೆ. ಅವರ ಚಿಹ್ನೆಯಾದ ಕಹಳೆಗೆ ಮತ ನೀಡಿ ಆಶೀರ್ವಾದಿಸಿ ಎಂದು ಮನವಿ ಮಾಡಿದರು.
ಹುಲಿದುರ್ಗದ ಜನತೆಗೆ ನಮಸ್ಕಾರ ಮಾಡಿ, 18ಕ್ಕೆ ಚುನಾವಣೆ ನಡೆಯಲಿದೆ. ಅಮ್ಮನಿಗೆ ವೋಟು ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಟೀಕೆ ಟಿಪ್ಪಣಿಗಳಿಗೆ ನಿಮ್ಮ ವೋಟಿನ ಮೂಲಕ ಉತ್ತರ ಕೊಡಿ ಎಂದು ಕೇಳಿಕೊಂಡರು.