ದಾವಣಗೆರೆ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ (C.P Yogeshwar) ಗೆದ್ದರೆ ಡಿಕೆಶಿ (D.K Shivakumar) ಸಿಎಂ ಆಗ್ತಾರೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಈಗ ಗೆದ್ದಿದ್ದಾರೆ ಏನು ಮಾಡ್ತಿರಾ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಕಾಂಗ್ರೆಸ್ (Congress) ಪವರ್ ಶೇರಿಂಗ್ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿದರು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡು ಇಲ್ಲಿವರೆಗೂ ಬಂದಿದ್ದಾರೆ. ರಾತ್ರಿ ಮಾತು ಖಾತ್ರಿ ಇರೋದಿಲ್ಲ ಎನ್ನುವಂತೆ ಇವರ ಮಾತುಗಳಿವೆ. ಅವರು ರಾಜಕೀಯವಾಗಿ ಇರುವ ತನಕ ಡಿಕೆಶಿ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ವಕ್ಫ್ (Waqf Board) ಜಾಗದ ವಿವಾದದ ವಿಚಾರವಾಗಿ, ರೈತರ ಮಠ ಮಂದಿಗಳ ಆಸ್ತಿ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಬ್ರಿಟಿಷರು ಮಾಡಿದ್ದ ಕಾನೂನನ್ನು ನೆಹರು ಉಳಿಸಿಕೊಂಡು ಬಂದರು. ಅದನ್ನು ಹಾಗೇ ಇಂದಿರಾಗಾಂಧಿಯವರು ಮುಂದುವರೆಸಿದರು. ಬಳಿಕ ಮನಮೋಹನ್ ಸಿಂಗ್ ಅವರು ವಕ್ಫ್‌ಗೆ ಪರಮಾಧಿಕಾರ ನೀಡಿದ್ದರು.
ಇದರ ಪರಿಣಾಮ ಯಾರು ಕೂಡ ವಕ್ಫ್ ಆಸ್ತಿಯನ್ನು ಪ್ರಶ್ನೆ ಮಾಡುವಂತಿಲ್ಲ. ಏನಾದರೂ ಪ್ರಶ್ನೆ ಮಾಡಬೇಕಾದರೆ ಅದು ವಕ್ಫ್ ನ್ಯಾಯಾಧಿಕರಣಕ್ಕೆ ಹೋಗಬೇಕು. ಇದು ತೋಳ ಕುರಿಯನ್ನು ತಿಂದಿದ್ದು, ಇನ್ನೊಂದು ಕುರಿ ನ್ಯಾಯಕ್ಕಾಗಿ ಅದೇ ತೋಟದ ಮುಂದೆ ನಿಂತಂತೆ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಈಗ ನಮಗೆ ತೊಂದರೆ ಆಗುತ್ತದೆ ಎಂದು ಸಿಎಂ ಎಚ್ಚೆತ್ತುಕೊಂಡಿದ್ದಾರೆ. 11ನೇ ಕಾಲಂನಲ್ಲಿ ವಕ್ಫ್‌ನ ಹೆಸರು ತೆಗೆಯುತ್ತೇನೆ ಎಂದು ಹೇಳಿದ್ದಾರೆ. ಪಹಣಿಯಲ್ಲಿ ಅಷ್ಟೇ ಅಲ್ಲ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕಿದೆ. ಈ ಎಲ್ಲಾ ಗೊಂದಲಕ್ಕೆ ಕಾರಣ ಕಾಂಗ್ರೆಸ್, ಬರೀ ಗೊಂದಲಕ್ಕೆ ಮುಳುಗಿಸಿ ಲೂಟಿ ಹೊಡೆಯುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಜಾಗ ಖರೀದಿ ಮಾಡಬೇಕಾದರೆ ಬಿಡಿಎಯಿಂದ ಎನ್‍ಓಸಿ ತೆಗೆದುಕೊಳ್ಳಬೇಕಿದೆ. ಆದರೆ ಈಗ ರಾಜ್ಯದಲ್ಲಿ ಜಮೀನು ಕೊಳ್ಳಬೇಕಾದರೆ ವಕ್ಫ್ ಬೋರ್ಡ್‍ನಿಂದ ಎನ್‍ಒಸಿ ಪಡೆಯಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.