ಉಡುಪಿ: ನನ್ನ ಪತಿ ಒಂಥರಾ ಮಾನಸಿಕ ಅಸ್ವಸ್ಥ, ಅವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಏನೇನೋ ಮಾತನಾಡುತ್ತಾರೆ ಎಂದು ಬಿಗ್‍ಬಾಸ್ (Bigg Boss Kannada 11) ಖ್ಯಾತಿಯ ಚೈತ್ರಾ ಕುಂದಾಪುರ (Chaitra Kundapura) ಅವರ ತಾಯಿ ರೋಹಿಣಿ ಹೇಳಿಕೊಂಡಿದ್ದಾರೆ. ಈ ಮೂಲಕ ಬಾಲಕೃಷ್ಣ ನಾಯ್ಕ್ ಹೇಳಿಕೆಗೆ ಅವರು ತಿರುಗೇಟು ಕೊಟ್ಟಿದ್ದಾರೆ.
ವೀಡಿಯೋ ಬಿಡುಗಡೆ ಮಾಡಿರುವ ರೋಹಿಣಿ, ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು ಎಂದಿದ್ದ ಪತಿಯ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ, ನನ್ನ ಪತಿ ಕುಟುಂಬದ ಜವಾಬ್ದಾರಿ ಇಲ್ಲದ ವ್ಯಕ್ತಿ. ಮನೆಯ ಯಾವ ಕಷ್ಟಕ್ಕೂ ಅವರು ಸ್ಪಂದಿಸಿದವರಲ್ಲ. ಯಾವ ಮನೆಯ ಜವಾಬ್ದಾರಿಯನ್ನೂ ಅವರು ತೆಗೆದುಕೊಂಡವರಲ್ಲ. ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲೋ ಹೋಗುತ್ತಾರೆ. ದುಡಿದ ಹಣವನ್ನು ದೊಡ್ಡ ಮಗಳಿಗೆ ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ
ಮಕ್ಕಳಿಗೆ ಓದಿಸುವಾಗ ಸಹಾಯ ಮಾಡಿಲ್ಲ, ಕೆಲಸಕ್ಕೆ ಹಾಕು ಎನ್ನುತ್ತಿದ್ದರು. ಮೂರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಿದವರಲ್ಲ. ಆ ಕಾಲದಲ್ಲಿ 2 ಲಕ್ಷ ರೂ. ಮನೆ ಕಟ್ಟಿದ್ದರು. ಆ ಮನೆ ಬಿದ್ದು ಹೋಗಿದೆ. ನಾನು ಚೂರುಪಾರು ಹಣ ದೊಡ್ಡ ಮಗಳ ಗಂಡನ ಸೊಸೈಟಿಯಲ್ಲಿ ಇಟ್ಟಿದ್ದೆ. ಆ ಹಣವನ್ನೂ ನನ್ನ ಗಂಡ ದೊಡ್ಡ ಮಗಳಿಗೆ ಕೊಟ್ಟಿದ್ದಾರೆ. ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಈಗ ಬೆನ್ನು ಬಿದ್ದಿದ್ದಾಳೆ. ಅವಳ ಮನೆಗೆ ಸಹಾಯ ಮಾಡಲು, ಚೈತ್ರಾ ಜಾಗ ಬರೆದುಕೊಟ್ಟಿದ್ದಾಳೆ. 25 ಲಕ್ಷ ರೂ. ಸಾಲ ನಾವೇ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ.
ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಾಕಲು ಹಿರಿಯ ಮಗಳು ಗಾಯಿತ್ರಿ ಸಂಚು ಮಾಡಿದ್ದಾಳೆ. ಇದಕ್ಕಾಗಿ, ಅಮ್ಮ ಮೋಸ ಮಾಡಿದಳು ಎಂದು ಹೇಳಿಕೊಂಡು ಬರುತ್ತಿದ್ದಾಳೆ. ಅವರು ಮದುವೆಗೆ ಬರದ ಹಾಗೆ ಅವಳು ತಡೆದಿದ್ದಾಳೆ. ಕುಂದಾಪುರದವರೆಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮರ್ಯಾದೆ ತೆಗೆಯಲು ಈ ರೀತಿ ಮಾಡಿದ್ದಾಳೆ. ಅವರಿಗೆ ಮದುವೆಗೆ ಬರಬೇಕು ಎಂದು ಬಹಳ ಇಷ್ಟ ಇತ್ತು. ಅವರೇ ಹೋಗಿ ಮದುವೆ ಕಾಗದವನ್ನು ಹಿರಿಯರ ಮನೆಗೆ ಕೊಟ್ಟು ಬಂದಿದ್ದರು. ಮನೆ ಪೇಂಟಿಂಗ್ ಕೂಡ ನಿಂತು ಮಾಡಿಸಿದ್ದರು. ಮದುವೆಗೆ ಬರುತ್ತೇನೆ ಎಂದು ಹೇಳಿದವರನ್ನು ಮಗಳು ತಡೆದಿದ್ದಾಳೆ. ಆಸ್ತಿಗಾಗಿ ನಾನು ಸಹಿ ಹಾಕಿಲ್ಲ ಎಂದು ಹೀಗೆ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚೈತ್ರ & ಆಕೆಯ ಪತಿ ಇಬ್ಬರೂ ಕಳ್ಳರು- ಮಗಳ ಮದುವೆಗೆ ತಂದೆ ಆಕ್ಷೇಪ