ವಿಜಯಪುರ: ಪಾನಮತ್ತನಾಗಿ ಕಚೇರಿಗೆ ಬಂದು, ಕೆಲಸ ಮಾಡುತ್ತಿದ್ದ ತಹಶೀಲ್ದಾರ್ ಒಬ್ಬರನ್ನು ರೈತರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಚಡಚಣದಲ್ಲಿ ನಡೆದಿದೆ.
ಬುಧವಾರ ತಹಶೀಲ್ದಾರ್ ಸಂಗಮೇಶ ಮೆಳ್ಳಿಗೇರಿ ಮದ್ಯ ಸೇವನೆ ಮಾಡಿ ಕಚೇರಿಗೆ ಆಗಮಿಸಿದ್ದರು. ವಿವಿಧ ಬೇಡಿಕೆಗೆ ಈಡೇರಿಸುವಂತೆ ಆಗ್ರಹಿಸಿ ಮನವಿ ಕೊಡಲು ಚಡಚಣ ತಾಲೂಕಾ ವಲಯ ಭಾರತೀಯ ಕಿಸಾನ್ ಸಂಘದ ಸದಸ್ಯರು ತಾಲೂಕು ಆಡಳಿತ ಕೇಂದ್ರಕ್ಕೆ ಬಂದಿದ್ದರು. ಮದ್ಯದ ಮತ್ತಿನಲ್ಲಿದ್ದ ಸಂಗಮೇಶ್ ರೈತರೊಂದಿಗೆ ಅನುಚಿತ ವರ್ತನೆ ಮಾಡಿದ್ದರು. ಇದರಿಂದ ರೋಸಿ ಹೋದ ರೈತ ಸಂಘಟನೆ ಮುಖಂಡರು, ಸಂಗಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ವರ್ತನೆ ಸರಿಪಡಿಸಿಕೊಳ್ಳದಿದ್ದಲ್ಲಿ ತಹಶೀಲ್ದಾರ್ ಹಠಾವೋ ಚಳುವಳಿ ನಡೆಸುವ ಎಚ್ಚರಿಕೆಯನ್ನು ರೈತರು ನೀಡಿದರು.
Advertisement
Advertisement
ನಾನು ನಿಮ್ಮ ತಾಲೂಕಿಗೆ ಒಳ್ಳೆಯ ಕೆಲಸ ಮಾಡಿ ಹೋಗುತ್ತೇನೆ. ರಾತ್ರಿ 2 ಗಂಟೆಯವರೆಗೆ ಕೆಲಸ ಮಾಡಿದ್ದೆ. ಹೀಗಾಗಿ ಕುಡಿದು ಕಚೇರಿಗೆ ಬಂದಿರುವೆ. ತಪ್ಪಾಗಿದೆ ಇದೇ ಕೊನೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಮದ್ಯದ ಅಮಲಿನಲ್ಲಿಯೇ ರೈತ ಮುಖಂಡರಿಗೆ ಸಂಗಮೇಶ್ ಮನವಿ ಮಾಡಿಕೊಂಡರು.
Advertisement
ಸಂಗಮೇಶ್ ಈ ಹಿಂದೆಯೂ ಅನೇಕ ಬಾರಿ ಮದ್ಯ ಸೇವನೆ ಮಾಡಿಯೇ ಕಚೇರಿಗೆ ಬಂದಿದ್ದರು. ಅಷ್ಟೇ ಅಲ್ಲದೆ ಹಿಂದಿನ ಜಿಲ್ಲಾಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಅಮಾನತುಗೊಂಡಿದ್ದರು. ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಗೆ ರೈತರು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಶಾಸಕರು ಸ್ಥಳೀಯ ಜನರಿಂದ ಲಿಖಿತ ದೂರು ಬಂದಲ್ಲಿ, ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.