ಬೆಂಗಳೂರು: ಏ.22, 23, 24ರಂದು ನಡೆದಿದ್ದ 2026ರ ಯುಜಿ ಸಿಇಟಿ (UG CET) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಇಂದು ಬೆಳಿಗ್ಗೆ 12 ಗಂಟೆಗೆ ಕೆಇಎ (KEA) ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ (Sharana Prakash Patil) ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಮಧ್ಯಾಹ್ನ 2 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
https://keaonline.karnataka.gov.in/ugcet_2026_results, https://keaonline.karnataka.gov.in/ugcet_2026_result ಹಾಗೂ https://cetonline.karnataka.gov.in/kea ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಏ.22, 23, 24ರಂದು ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು. ಒಟ್ಟು ಕೇಂದ್ರಗಳಲ್ಲಿ 15,265 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ರಾಜ್ಯಾದ್ಯಂತ ಒಟ್ಟು 1,86,099 ವಿದ್ಯಾರ್ಥಿನಿಯರು ಹಾಗೂ 1,44,380 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ರು. ಈ ಬಾರಿಯ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದು ಭಾರೀ ಸದ್ದು ಮಾಡಿತ್ತು. ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿ, ಕೊನೆಗೆ ಕೆಇಎ ನಿರ್ದೇಶನದ ಮೇರೆಗೆ ಮೂವರು ಅಧಿಕಾರಿಗಳನ್ನ ಅಮಾನತು ಮಾಡಲಾಗಿತ್ತು.
ಒಟ್ಟು 3,30,646 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 3,09,014 ಮಕ್ಕಳು ಸಿಇಟಿ ಪರೀಕ್ಷೆ ಬರೆದಿದ್ರು. ಭೌತಶಾಸ್ತ್ರದಲ್ಲಿ 3,09,014 ಮಕ್ಕಳು, ರಸಾಯನ ಶಾಸ್ತ್ರದಲ್ಲಿ 3,08,946 ಮಕ್ಕಳು, ಗಣಿತದಲ್ಲಿ 3,02,384 ಮಕ್ಕಳು ಹಾಗೂ ಜೀವಶಾಸ್ತ್ರದಲ್ಲಿ 2,31,023 ಮಕ್ಕಳು ಪರೀಕ್ಷೆ ಬರೆದಿದ್ರು. ಈ ಪೈಕಿ 2,92,782 ಮಕ್ಕಳು ಈ ಬಾರಿ ಅರ್ಹತೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಸಲ ಸಂಪೂರ್ಣ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಫೇಸ್ ರೆಕಗ್ನೇಷನ್ ಮೂಲಕ ಪರೀಕ್ಷೆ ನಡೆಸಲಾಗಿ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್ ಆಗಿದೆ. ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರದ ತಲಾ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದೆ ಎಂದು ತಿಳಿಸಿದ್ದಾರೆ.
