ನವದೆಹಲಿ: ಪೆನ್‌ಡ್ರೈವ್ ಪ್ರಕರಣದ (Pen-drive Case) ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ (Show Cause Notice) ಜಾರಿ ಮಾಡಿದ್ದು, ನಿಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಶೀಘ್ರ ಉತ್ತರ ನೀಡುವಂತೆ ಅದು ಸೂಚಿಸಿದೆ.
ಎಸ್‌ಐಟಿ ಪತ್ರದ ಬೆನ್ನಲ್ಲೆ ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ ಆರಂಭಿಸಿರುವ ವಿದೇಶಾಂಗ ಸಚಿವಾಲಯ (External Affairs Ministry), ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ನ್ಯಾಯಲಯ ಕೂಡಾ ಅರೆಸ್ಟ್ ವಾರೆಂಟ್ ಹೊರಡಿಸಿದೆ. ಪ್ರಕರಣದ ಬೆನ್ನಲ್ಲೆ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ನೀವು ವಿದೇಶಕ್ಕೆ ತೆರಳಿದ್ದೀರಿ. ವಿಚಾರಣೆಯಿಂದ ಪಾರಾಗಾಲು ನೀವು ಪಾಸ್‌ಪೋರ್ಟ್ ದುರುಪಯೋಗಪಡಿಸಿಕೊಂಡು ವಿದೇಶ ಪ್ರಯಾಣ ಮಾಡಿದ್ದು, ನಿಮ್ಮ ಪಾಸ್‌ಪೋರ್ಟ್ ಅನ್ನು ಯಾಕೆ ರದ್ದು ಮಾಡಬಾರದು ಎಂದು ಕೇಳಿದೆ. ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಎಸ್‌ಐಟಿ ಸಹಾಯವಾಣಿಗೆ 30 ಕ್ಕೂ ಹೆಚ್ಚು ಕರೆ
ಈ ಬಗ್ಗೆ ವಿವರವಾದ ಮಾಹಿತಿಯನ್ನು ನಿರ್ದಿಷ್ಟ ಅವಧಿಯಲ್ಲಿ ನೀಡಬೇಕು. ಒಂದು ವೇಳೆ ಮಾಹಿತಿ ತೃಪ್ತಕರ ಎನಿಸದಿದ್ದಲ್ಲಿ ಪಾಸ್‌ಪೋರ್ಟ್ ರದ್ದು ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಈಗ ಉತ್ತರ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಶೋಕಾಸ್ ನೋಟಿಸ್‌ಗೆ ಪ್ರಜ್ವಲ್ ರೇವಣ್ಣ ಉತ್ತರ ನೀಡದಿದ್ದಲ್ಲಿ ವಿದೇಶಾಂಗ ಸಚಿವಾಲಯ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲಿದೆ. ಬಳಿಕ ಜರ್ಮನಿಯಿಂದ ಬೇರೆ ಇನ್ಯಾವುದೇ ದೇಶಕ್ಕೆ ಪ್ರಜ್ವಲ್ ಪ್ರಯಾಣ ಮಾಡಲು ಸಾಧ್ಯವಿಲ್ಲ. ಪ್ರಯಾಣ ಮಾಡುವ ಪ್ರಯತ್ನಪಟ್ಟಿಲ್ಲಿ ಸ್ಥಳೀಯ ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ. ಪಾಸ್‌ಪೋರ್ಟ್ ರದ್ದಾದರೆ ಪ್ರಜ್ವಲ್ ಭಾರತಕ್ಕೆ ಬರುವುದು ಕಷ್ಟಕರವಾಗಲಿದ್ದು, ‘ಇಸಿ’ ಕಡ್ಡಾಯವಾಗಿ ಪಡೆದು ಬರಬೇಕಾಗುತ್ತದೆ. ಇದನ್ನೂ ಓದಿ: ಹಾಸನ ಜಿಲ್ಲೆಯ ಜನ ನನ್ನ ಕೈ ಬಿಡಲ್ಲ: ರೇವಣ್ಣ