ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಯುಜಿಸಿ-ನೆಟ್ ಪರೀಕ್ಷೆ ಮುಂದೂಡಿಕೆ ಹಾಗೂ ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ವಿವಾದದ ಮಧ್ಯೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ಮಹಾನಿರ್ದೇಶಕರನ್ನು ವಜಾಗೊಳಿಸಲಾಗಿದೆ.
ನೀಟ್-ಯುಜಿ ಪರೀಕ್ಷಾ ಅಕ್ರಮ ಮತ್ತು ಯುಜಿಸಿ-ನೆಟ್ ಪರೀಕ್ಷೆ ಮುಂದೂಡಿಕೆ ವಿರುದ್ಧ ದೇಶದ ಹಲವು ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಪರೀಕ್ಷಾ ಅಕ್ರಮ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳೂ ಕಿಡಿಕಾರಿವೆ. ಇದನ್ನೂ ಓದಿ: ಭಾನುವಾರ ನಡೆಯಬೇಕಿದ್ದ ನೀಟ್-ಪಿ.ಜಿ ಪರೀಕ್ಷೆ ಮುಂದೂಡಿಕೆ
ಎನ್‌ಟಿಎಯ ಮಹಾನಿರ್ದೇಶಕರಾಗಿದ್ದ ಸುಬೋಧ್ ಕುಮಾರ್ ಸಿಂಗ್ (Subodh Kumar Singh) ಅವರನ್ನು ವಜಾಗೊಳಿಸಿದ್ದು, ಅವರ ಸ್ಥಾನಕ್ಕೆ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ನಿಯಮಿತ ಪದಾಧಿಕಾರಿಯ ನೇಮಕದವರೆಗೆ ಅಥವಾ ಮುಂದಿನ ಆದೇಶದವರೆಗೆ NTA ಯ ಮಹಾನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಖರೋಲಾ ಅವರಿಗೆ ನೀಡಲಾಗಿದೆ. ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ
ಏಜೆನ್ಸಿಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಶಿಫಾರಸು ನೀಡುವ ಸಮಿತಿಯನ್ನು ಸರ್ಕಾರವು ರಚಿಸಿದ ಕೆಲವೇ ಗಂಟೆಗಳ ನಂತರ ಈ ಕ್ರಮವು ಬಂದಿದೆ.