ನವದೆಹಲಿ: ಕೇಂದ್ರ ಸರ್ಕಾರ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026(FCRA Amendment Bill) ಅನ್ನು ಸಮಗ್ರ ಪರಿಶೀಲನೆ ಹಾಗೂ ಅಗತ್ಯ ಸಲಹೆಗಳಿಗಾಗಿ ಸಂಸತ್ತಿನ ಜಂಟಿ ಸಮಿತಿಗೆ (Joint Parliamentary Committee – JPC) ರವಾನಿಸಿದೆ.
ಈ ಸಮಿತಿಯು ಒಟ್ಟು 31 ಸದಸ್ಯರನ್ನು ಒಳಗೊಂಡಿರಲಿದೆ. ಲೋಕಸಭೆಯಿಂದ 21 ಸದಸ್ಯರನ್ನು ಹಾಗೂ ರಾಜ್ಯಸಭೆಯಿಂದ 10 ಸದಸ್ಯರನ್ನು ಈ ಸಮಿತಿಗೆ ಆಯ್ಕೆ ಮಾಡಲು ಪ್ರಸ್ತಾವಿಸಲಾಗಿದೆ
ಈ ಜಂಟಿ ಸಮಿತಿಯು ತನ್ನ ಪರಿಶೀಲನಾ ವರದಿಯನ್ನು 2026ರ ಚಳಿಗಾಲದ ಸಂಸತ್ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಲೋಕಸಭೆಗೆ ಸಲ್ಲಿಸಬೇಕೆಂದು ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ತಿದ್ದುಪಡಿ ಮಸೂದೆಯನ್ನು ಜೆಪಿಸಿಗೆ ಉಲ್ಲೇಖಿಸಲು ಪ್ರಸ್ತಾವನೆಯನ್ನು ಮಂಡಿಸುತ್ತಿದ್ದಂತೆ ವಿಪಕ್ಷಗಳು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದವು.
ಆರ್‌ಎಸ್‌ಎಸ್ ವಿದೇಶಿ ನಿಧಿಯನ್ನು ಪಡೆಯುತ್ತಲೇ ಇರುವಾಗ ಎನ್‌ಜಿಒಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಮಸೂದೆಯನ್ನು ಹಿಂಪಡೆಯಬೇಕೆಂದು ವಿಪಕ್ಷಗಳು ಆಗ್ರಹಿಸಿ ಪ್ರತಿಭಟನೆ ನಡೆಸಿದವು.

