ನವದೆಹಲಿ: ಬಳಕೆದಾರರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಅಕ್ರಮ ಸಾಲದ ಅಪ್ಲಿಕೇಶನ್‌ಗಳು (loan apps) ಸೇರಿದಂತೆ ಸುಮಾರು 3,718 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಮಂಗಳವಾರ ಲೋಕಸಭೆಗೆ ತಿಳಿಸಿದರು.
ಈ ವರ್ಷ ಜೂನ್ 30 ರವರೆಗೆ, ವಂಚನೆಯ ಸಾಲದ ಅಪ್ಲಿಕೇಶನ್‌ಗಳು ಸೇರಿದಂತೆ 3,718 ಮೊಬೈಲ್ ಅಪ್ಲಿಕೇಶನ್‌ಗಳನ್ನ (Mobile Apps) ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) 2000 ನೇ ಇಸವಿಯ ಐಟಿ ಕಾಯ್ದೆಯ ಸೆಕ್ಷನ್ 69(A), 79(3)(b) ಅಡಿಯಲ್ಲಿ ನಿರ್ಬಂಧಿಸಿದೆ ಎಂದು ಹೇಳಿದರು.

ವಿವಿಧ ಪೊಲೀಸ್ ಇಲಾಖೆಗಳಲ್ಲಿ ವರದಿ ಮಾಡಿದಂತೆ 15.75 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು 5.77 ಲಕ್ಷ IMEI ಗಳನ್ನು ಕೇಂದ್ರವು ನಿರ್ಬಂಧಿಸಿದೆ ಎಂದು ಸಂಜಯ್ ಕುಮಾರ್ ವಿವರಿಸಿದರು.
ಹಣಕಾಸು ವಂಚನೆಗಳ ತಕ್ಷಣದ ವರದಿಗಾಗಿ 2021 ರಲ್ಲಿ ಪ್ರಾರಂಭಿಸಲಾದ I4C-ನಿರ್ವಹಣೆಯ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ’ (CFCFRMS) ನಿಂದ ವಂಚನೆಯಿಂದ 11,158 ಕೋಟಿ ರೂ.ಗಳಿಗೂ ಹೆಚ್ಚು ಉಳಿತಾಯವಾಗಿದೆ ಎಂದು ಲೋಕಸಭೆಗೆ ತಿಳಿಸಿದರು.

