ಹುಬ್ಬಳ್ಳಿ: ನಗರದ ವೀರಾಪುರ ಓಣಿ ನಿವಾಸಿ ಮೃತ ಅಂಜಲಿ ಅಂಬಿಗೇರ (Anjali Ambigera) ಕುಟುಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು (Pralhad Joshi) ವೈಯಕ್ತಿಕವಾಗಿ 50 ಸಾವಿರ ರೂ. ಚೆಕ್ ಅನ್ನು ಹಸ್ತಾಂತರಿಸಿದರು.
ಅಂಜಲಿ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಹಾರದಿಂದ ನೇರವಾಗಿ ಅಂಜಲಿ ಮನೆಗೆ ಭೇಟಿ ನೀಡಿದ್ದೇನೆ. ಅಂಜಲಿಯ ಅಜ್ಜಿಸಹೋದರಿಯರು ಹೇಳಿದ ಮಾತು ಕೇಳಿದ್ರೆ ಭಯ ಹುಟ್ಟುತ್ತೆ. ಈ ಹಿಂದೆಯೂ ಆರೋಪಿ ಬಗ್ಗೆ ದೂರು ಕೇಳಿಬಂದಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಆ ಸಂದರ್ಭ ಯಾವ ಅಧಿಕಾರಿಗಳಿದ್ದರು ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ನೇಹಾ ಹತ್ಯೆಯಾದಾಗ ಬಹೊದೊಡ್ಡ ಜನಾಂದೋಲನವಾಯಿತು. ಆ ವೇಳೆ ಸಿಎಂ ಹಾಗೂ ಗೃಹ ಸಚಿವರ ಹೇಳಿಕೆ ಕೃತ್ಯ ನಡೆಸುವವರಿಗೆ ಪ್ರೋತ್ಸಾಹ ನೀಡಿದಂತಾಯಿತು. ಸಿಎಂ ಅವರು ಹೊಣೆಗೇಡಿತನದ ಹೇಳಿಕೆ ನೀಡಿದ್ದರ ಪರಿಣಾಮ ಈ ಘಟನೆಯಾಗಿದೆ. ಸರ್ಕಾರಕ್ಕೆ ಗಂಭೀರತೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 490 ಕೊಲೆ 600 ರೈತರ ಆತ್ಮಹತ್ಯೆಗಳಾಗಿವೆ. ಇದನ್ನ ಪ್ರಶ್ನೆ ಮಾಡಿದ್ರೆ ಈ ಹಿಂದೆ ಎಷ್ಟು ಪ್ರಕರಣಗಳಾಗಿವೆ ಅಂತಾ ಹುಡುಕುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ
ಟ್ರಾನ್ಸ್ ಫರ್ ಗಳಲ್ಲಿ ಸಿಕ್ಕಾಪಟ್ಟೆ ಹಣ ತೆಗೆದುಕೊಳ್ತಾರೆ. ಗಾಂಜಾ ಅಫೀಮು ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆಗ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಸರ್ಕಾರದಲ್ಲಿ ಹತ್ಯೆ ಹಾಗೂ ಆತ್ಮಹತ್ಯೆ ಸೇರಿದಂತೆ ಅಭಿವೃದ್ದಿಯ ಸಮಾಧಿಯಾಗಿದೆ. ಅನೇಕ ಬಡಜನರು ತಮ್ಮ ಮಕ್ಕಳನ್ನ ಕಾಲೇಜಿಗೆ ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ. ಯಾರೋ ಒಬ್ಬ ಅಧಿಕಾರಿ ಸಸ್ಪೆಂಡ್ ಮಾಡಿ ಕೈತೊಳೆದುಕೊಳ್ಳಬಾರದು. ಜನರು ಗಾಬರಿಗೊಂಡಿದ್ದಾರೆ ಎಂದರು.
ಜನರೇ ಬಂದು ಹೋರಾಟ ಮಾಡುವ ಪರಿಸ್ಥಿತಿಯನ್ನ ಸರ್ಕಾರ ತಂದುಕೊಳ್ಳಬಾರದು. ಡ್ರಗ್ಸ್, ಗಾಂಜಾ ಅಫೀಮು ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಈ ಪ್ರಕರಣದ ಸಂಪೂರ್ಣ ತನಿಖೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ತೆರೆಯಬೇಕು. ಈಘಟನೆಗಳಿಗೆ ಸರ್ಕಾರ ಹಾಗೂ ಗೃಹ ಸಚಿವರ ನಿರ್ಲಕ್ಷ್ಯವೇ ಕಾರಣ ಎಂದು ಜೋಶಿ ಗರಂ ಆದರು.