ನವದೆಹಲಿ: ರಾಜ್ಯದಲ್ಲಾಗಿರುವ ಪ್ರವಾಹದಿಂದಾಗಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರೀ ಕುತೂಹಲ ಮೂಡಿಸಿತ್ತು. ಆದರೆ, ಈ ಕುರಿತು ಮಾತನಾಡಬೇಕಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರೇ ಸಂಪುಟ ಸಭೆಗೆ ಗೈರಾಗಿದ್ದರು.
Advertisement
ಸಭೆಯಲ್ಲಿ ರಾಜ್ಯದಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಭಾಗವಹಿಸಿದ್ದು, ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಸಬೇಕಿದ್ದ ಸಚಿವರು ಪರಿಸ್ಥಿತಿಯನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ರೀತಿಯ ನಿರ್ಣಯವನ್ನು ಕೈಗೊಂಡಿಲ್ಲ. ವಾಸ್ತವ ಅರ್ಥ ಮಾಡಿಸದ ಹಿನ್ನೆಲೆ ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿಲ್ಲ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
Advertisement
Advertisement
ಫನಿ ಚಂಡಮಾರುತದ ವೇಳೆ ಚೆನ್ನೈ ಮತ್ತು ಒಡಿಶಾದಲ್ಲಿ ಪ್ರವಾಹ ಸಂಭವಿಸಿದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮಿಕ್ಷೆ ನಡೆಸಿದ್ದರು. ಸಮೀಕ್ಷೆ ಬಳಿಕ ಅಧಿಕಾರಗಳಸಭೆ ನಡೆಸಿ ಒಡಿಶಾ ಮತ್ತು ಚೆನ್ನೈಗೆ ಸಾವಿರ ಕೋಟಿ ರೂ. ತುರ್ತಾಗಿ ಬಿಡುಗಡೆ ಮಾಡಿದ್ದರು. ಈ ಬಾರಿ ರಾಜ್ಯದ ನಾಯಕರು ಒತ್ತಡ ಹಾಕದ ಕಾರಣ ಪ್ರಧಾನಿ ನರೇಂದ್ರ ಮೋದಿ ಇನ್ನೂ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಅಮಿತ್ ಶಾ ಕಳುಹಿಸಿ ಸುಮ್ಮನಾಗಿದ್ದಾರೆ. ಕೇಂದ್ರ ಸಚಿವರು ಈ ಕುರಿತು ಗಮನ ಸೆಳೆಯಬೇಕಿತ್ತು ಎಂದು ವಿರೋಧ ಪಕ್ಷಗಳು ಕಿಡಿ ಕಾರಿವೆ.