ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿ ಸುಮಾರು 2 ತಿಂಗಳು ಕಳೆದಿದೆ. ಆದರೆ ಮಾಜಿ ಸಂಸದರು ನೂತನ ಸಂಸದರಿಗೆ ಸರ್ಕಾರಿ ನಿವಾಸ ಬಿಟ್ಟು ಕೊಡದೆ ಅಲ್ಲಿಯೇ ವಾಸವಿದ್ದಾರೆ. ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 1 ವಾರದೊಳಗೆ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ಮಾಜಿ ಸಂಸದರಿಗೆ ಆದೇಶ ನೀಡಿದೆ. ಜೊತೆಗೆ ಮೂರು ದಿನದೊಳಗೆ ನಿವಾಸಗಳಿಗೆ ನೀಡಿದ್ದ ನೀರು, ಗ್ಯಾಸ್ ಹಾಗೂ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಹೌದು. ಮೇ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 16ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದರು. ಬಳಿಕ ಎರಡನೇ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ನಿಯಮದ ಪ್ರಕಾರ, ಲೋಕಸಭೆ ವಿಸರ್ಜನೆಗೊಂಡ 1 ತಿಂಗಳ ಒಳಗೆ ಮಾಜಿ ಸಂಸದರು ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು. ಆದರೆ ಅವಧಿ ಮೀರಿ 2 ತಿಂಗಳು ಕಳೆಯುತ್ತಾ ಬಂದಿದ್ದರೂ ಮಾಜಿ ಸಂಸದರು ಮಾತ್ರ ನಿವಾಸ ಖಾಲಿ ಮಾಡಿಲ್ಲ. ಇದನ್ನೂ ಓದಿ:ಅಧಿಕೃತ ನಿವಾಸವನ್ನು 1 ತಿಂಗಳಲ್ಲಿ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾದ ಸುಷ್ಮಾ ಸ್ವರಾಜ್
Advertisement
Advertisement
ನಗರದ ಪ್ರತಿಷ್ಠಿತ ಲ್ಯೂಟೆನ್ಸ್ ದೆಹಲಿ ಪ್ರದೇಶದಲ್ಲಿ ಹಂಚಿಕೆ ಮಾಡಲಾಗಿದ್ದ ಸರ್ಕಾರಿ ನಿವಾಸಗಳಲ್ಲಿಯೇ 200 ಮಾಜಿ ಸಂಸದರು ಉಳಿದುಕೊಂಡಿದ್ದಾರೆ. ಅವರಿಗೆ ಮನೆ ಖಾಲಿ ಮಾಡಲು ಏಳು ದಿನಗಳ ಗಡುವು ನೀಡಲಾಗಿದ್ದು, ಮೂರು ದಿನದೊಳಗೆ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸೂಚನೆ ನೀಡಿದೆ ಎಂದು ಸಂಸತ್‍ನ ವಸತಿ ಸಮಿತಿ ಅಧ್ಯಕ್ಷ ಸಿ.ಆರ್.ಪಾಟೀಲ್ ತಿಳಿಸಿದ್ದಾರೆ.
Advertisement
ಮಾಜಿ ಸಂಸದರು ಸರ್ಕಾರಿ ನಿವಾಸವನ್ನು ಖಾಲಿ ಮಾಡದ ಕಾರಣಕ್ಕೆ ಹೊಸ ಸಂಸದರಿಗೆ ವಸತಿ ಕಲ್ಪಿಸುವುದು ಕಷ್ಟವಾಗಿದೆ. ಸದ್ಯ ನೂತನ ಸಂಸದರು ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
Advertisement
ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜೂನ್ ತಿಂಗಳಿನಲ್ಲಿ ಟ್ವೀಟ್ ಮಾಡಿ ಸರ್ಕಾರ ನೀಡಿದ ನಿವಾಸವನ್ನು ಖಾಲಿ ಮಾಡುತ್ತೇನೆ ಎಂದು ತಿಳಿಸಿದ್ದರು. ನಾನೀಗ ನಂ.8 ಸಫ್ದಾರ್ಜಂಗ್ ರಸ್ತೆ, ನವದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದೇನೆ. ಹೀಗಾಗಿ ನಾನು ಈ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದರು. ಸುಷ್ಮಾ ಸ್ವರಾಜ್ ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.
I have moved out of my official residence 8, Safdarjung Lane, New Delhi. Please note that I am not contactable on the earlier address and phone numbers.
— Sushma Swaraj (@SushmaSwaraj) June 29, 2019
ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ತಿದ್ದುಪಡಿ ಮಸೂದೆ ಈ ಬಾರಿಯ ಸಂಸತ್ತಿನಲ್ಲಿ ಮಂಡನೆಯಾಗಿ ಎರಡು ಸದನದಲ್ಲಿ ಪಾಸ್ ಆಗಿತ್ತು.
ಈ ಕಾಯ್ದೆ ಅನ್ವಯ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಎಸ್ಟೇಟ್ ಅಧಿಕಾರಿಗೆ ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ಬಂಗಲೆಯಲ್ಲಿ 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ವಾಸವಾಗಿದ್ದಲ್ಲಿ 10 ಲಕ್ಷ ರೂ. ದಂಡ ವಿಧಿಸುವ ಅಂಶ ಕಾಯ್ದೆಯಲ್ಲಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವರ್ಷ ಲಕ್ನೋನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡಲು 2 ವರ್ಷಗಳ ಕಾಲಾವಕಾಶವನ್ನು ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಬಿಎಸ್‍ಪಿ ಸಂಸ್ಥಾಪಕ ಹಾಗೂ ಮಾರ್ಗದರ್ಶಕ ಕನ್ಶಿ ರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸಲು ಯತ್ನಿಸಿ ಟೀಕೆ ಒಳಗಾಗಿದ್ದರು.