ಸಿಡಿಎಸ್ ರಾವತ್ ಸೇರಿ 13 ಮಂದಿ ಹುತಾತ್ಮ – ಬೆಳಗ್ಗೆಯಿಂದ ಏನೇನಾಯ್ತು?

Public TV
2 Min Read
CDS Bipin Rawat

– ತಮಿಳುನಾಡಿನ ಊಟಿ ಬಳಿ ಘನಘೋರ ದುರಂತ
– ಭಾರತೀಯ ಸೇನೆಯ ಬಲಿಷ್ಠ ನಾಯಕ ದುರ್ಮರಣ

ಚೆನ್ನೈ/ನವದೆಹಲಿ: ತಮಿಳುನಾಡಿನಲ್ಲಿ ಘನಘೋರ ಅನಾಹುತ ಸಂಭವಿಸಿದ್ದು ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರು ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದಾರೆ.

ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ನೀಲಗಿರಿ ಅರಣ್ಯ ವ್ಯಾಪ್ತಿಯ ಊಟಿ ಬಳಿ ದೊಡ್ಡ ಸ್ಫೋಟದೊಂದಿಗೆ ಪತನವಾಗಿದೆ.

ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಸೇರಿ 14 ಮಂದಿ ಪಯಣಿಸುತ್ತಿದ್ದರು. ದುರಂತದಲ್ಲಿ ಬಿಪಿನ್ ರಾವತ್, ಮತ್ತವರ ಪತ್ನಿ ಸೇರಿ 13 ಮಂದಿ ಬಲಿ ಆಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‍ಗೆ ವೆಲ್ಲಿಂಗ್ಟನ್‍ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೇ.95ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏನಿದು ಸಿಡಿಎಸ್ ಹುದ್ದೆ? ಈ ಹುದ್ದೆಯನ್ನು ಸೃಷ್ಟಿಸಿದ್ದು ಯಾಕೆ? – ಇಲ್ಲಿದೆ ಸಮಗ್ರ ವಿವರ

ಘಟನಾ ಸ್ಥಳದ ಚಿತ್ರಣ ಭೀಕರವಾಗಿತ್ತು. ಗಂಟೆಗಳ ಕಾಲ ಬೆಂಕಿ ಧಗಧಗಿಸುತ್ತಿತ್ತು. ಮೃತದೇಹಗಳು ಮತ್ತು ಹೆಲಿಕಾಪ್ಟರ್ ಬಿಡಿಭಾಗಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಕೆಲ ಹೊತ್ತು ಕಾಪ್ಟರ್ ಸನಿಹಕ್ಕೆ ಹೋಗದಷ್ಟು ಬೆಂಕಿ ಜ್ವಾಲೆ ಇತ್ತು. ಬೆಂಕಿಯ ತೀವ್ರತೆಗೆ ಇಡೀ ಪ್ರದೇಶ ಸುಟ್ಟು ಕರಕಲಾಗಿದೆ. ಕೂಡಲೇ ಪೊಲೀಸರು, ಅಗ್ನಿಶಾಮಕ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ದುರಂತ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯೊಬ್ಬನನ್ನು ಸಿಆರ್‌ಪಿಎಫ್‌ನ ಕೋಬ್ರಾ ಪಡೆ ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

ಬೆಳಗ್ಗೆಯಿಂದ ಏನೇನಾಯ್ತು?
ತಮಿಳುನಾಡಿನ ವೆಲ್ಲಿಂಗ್ಟನ್‍ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಇಂದು ಬಿಪಿನ್‌ ರಾವತ್‌ ಉಪನ್ಯಾಸ ನೀಡಬೇಕಿತ್ತು. ಹೀಗಾಗಿ ದೆಹಲಿಯಿಂದ ಬೆಳಗ್ಗೆ 9ಕ್ಕೆ ಸೇನಾ ವಿಮಾನದಲ್ಲಿ ಸೂಳೂರಿನತ್ತ 9 ಮಂದಿ ಪ್ರಯಾಣ ಬೆಳೆಸಿದ್ದರು. ಬೆಳಗ್ಗೆ 11:35ಕ್ಕೆ ಸೂಳೂರಿಗೆ ಬಿಪಿನ್ ರಾವತ್ ಅವರಿದ್ದ ಸೇನಾ ವಿಮಾನ ಲ್ಯಾಂಡ್ ಆಗಿದೆ. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‌ನಲ್ಲಿ 14 ಮಂದಿ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12:22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು

ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಹೆಲಿಕಾಪ್ಟರ್‌ ಪತನಗೊಂಡಿದೆ. ಈ ವೇಳೆ ಭಾರೀ ಬೆಂಕಿ, ದಟ್ಟ ಹೊಗೆ ಕಾಣಿಸಿದೆ. ಮರಗಳ ಮೇಲೆ ಕಾಪ್ಟರ್ ಪತನ ಆಗುವಾಗ ಬೆಂಕಿಯುಂಡೆಯಂತೆ ನಾಲ್ವರು ಹೊರಗೆ ಜಿಗಿದಿದ್ದಾರೆ. 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಊಟಿ ಬಳಿ ಸೇನಾ ಹೆಲಿಕಾಪ್ಟರ್‌ ಪತನ- Mi-17 V5 ಹೆಲಿಕಾಪ್ಟರ್ ವಿಶೇಷತೆ ಏನು?

Share This Article