Bengaluru City

ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

Published

on

Share this

ಬೆಂಗಳೂರು: ಚಂದನವನದ ಮಾದಕ ಜಾಲದ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಕಂಬಿ ಎಣಿಸಿ, ಜಾಮೀನಿನ ಮೇಲಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇಬ್ಬರೂ ಡ್ರಗ್ಸ್ ಸೇವಿಸಿರೋದು ದೃಢವಾಗಿದ್ದು, ಮತ್ತೆ ಪರಪ್ಪನ ಅಗ್ರಹಾರ ಸೇರುವ ಭೀತಿ ಎದುರಿಸುತ್ತಿದ್ದಾರೆ.

10 ತಿಂಗಳ ಬಳಿಕ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲ ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. ಸೆಪ್ಟೆಂಬರ್ 13, 2020ರಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಕ್ತ, ಯೂರಿನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಮತ್ತೆ ಡಿಸೆಂಬರ್ 5ರಂದು ಕೋರ್ಟ್ ಅನುಮತಿ ಪಡೆದು, ಕೂದಲು, ರಕ್ತ, ಯೂರಿನ್ ಅಂಶಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಎಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತಲೆ ಕೂದಲ ಮೂಲಕ ಡ್ರಗ್ಸ್ ಸೇವನೆ ಖಚಿತ ಆಗಿರೋದು ಇದೇ ಮೊದಲ ಕೇಸ್ ಎಂದು ಸಿಸಿಬಿ ಹೇಳಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ನಮ್ಮನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ಸಂಜನಾ ತಾಯಿ

ಡ್ರಗ್ಸ್ ಸೇವನೆ ಖಚಿತ, ಮುಂದೇನು?
ಡ್ರಗ್ಸ್ ಕೇಸಲ್ಲಿ ಕೂದಲು ಮೂಲಕ ಪತ್ತೆ ಹಚ್ಚಿರೋದು ರಾಜ್ಯದಲ್ಲಿ ಇದೇ ಮೊದಲ ಕೇಸ್ ಆಗಿದೆ. ರಾಗಿಣಿ, ಸಂಜನಾ ವಿರುದ್ಧ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಎಫ್‍ಎಸ್‍ಎಲ್ ವರದಿ, ಸಿಸಿಬಿ ವಿಚಾರಣೆ ವೇಳೆ ಇಬ್ಬರ ವಿರುದ್ಧ ನಟರು ಕೊಟ್ಟಿರುವ ಹೇಳಿಕೆಯನ್ನು ಸಾಕ್ಷ್ಯವಾಗಿ ಉಲ್ಲೇಖಿಸಿದ್ದಾರೆ.

ಹೈದ್ರಾಬಾದ್ ಎಫ್‍ಎಸ್‍ಎಲ್ ರಿಪೋರ್ಟ್ ಬಗ್ಗೆ ಕೋರ್ಟ್ ಪರಿಶೀಲನೆ ನಡೆಸಲಿದೆ. ಇಬ್ಬರ ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಲಿದ್ದಾರೆ. ಈ ವೇಳೆ ಪೂರಕ ಸಾಕ್ಷ್ಯ ಕೊಟ್ಟು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಲಿದ್ದಾರೆ. ವಿಚಾರಣೆ ಬಳಿಕ ಆರೋಪ ಸಾಬೀತಾದರೆ ಸಂಜನಾ, ರಾಗಿಣಿಗೆ ಕೋರ್ಟ್ ಶಿಕ್ಷೆ ವಿಧಿಸಬಹುದು. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟಿ ಮಣಿಯರು ಹೈಕೋರ್ಟ್ ಮೊರೆ ಹೋಗಬಹುದು. ಇದನ್ನೂ ಓದಿ: ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ: ಇಂದ್ರಜಿತ್ ಲಂಕೇಶ್

ರಾಗಿಣಿ ಮಾದಕ ಲೋಕ:
ಡ್ರಗ್ಸ್ ದಂಧೆಕೋರರ ಜೊತೆಗೆ ನಟಿ ರಾಗಿಣಿ ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಚಾಟ್ ಮಾಡಿರುವುದು, ಡ್ರಗ್ಸ್‍ಗಾಗಿ ಡೀಲರ್ಸ್ ಜೊತೆ 49 ಬಾರಿ ದೂರವಾಣಿ ಸಂಭಾಷಣೆ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಅಲ್ಲದೆ ನಟಿ ರಾಗಿಣಿ ಕೊಕೇನ್, ಎಂಡಿಎಂಎ, ಎಕ್ಸ್‍ಟೆಸಿ ಮಾತ್ರೆ ತರಿಸಿಕೊಂಡಿದ್ದರು. ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಕೊಕೇನ್ ಪೌಡರ್‍ನ್ನು 2 ಲೈನ್ ಆಗಿ ಮಾಡುತ್ತಿದ್ದರು. ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಮೂಗಿನಿಂದ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಬೆಂಗಳೂರಿನ ಫ್ಯಾಷನ್ ಶೋನಲ್ಲೂ ಮಾದಕ ಪಾರ್ಟಿ ನಡೆಯುತ್ತಿತ್ತು. ರಾಗಿಣಿ ತಾವು ಮಾದಕ ದ್ರವ್ಯ ಸೇವನೆ ಮಾಡಿ ಬೇರೆಯವರಿಗೂ ಪ್ರಚೋದಿಸುತ್ತಿದ್ದರು. ಈ ಬಗ್ಗೆ ರಾಗಿಣಿ ಡ್ರೈವರ್ ಇಮ್ರಾನ್, ರವಿಶಂಕರ್ ಪತ್ನಿ ಸೇರಿ 19 ಮಂದಿ ಹೇಳಿಕೆಯನ್ನು ಸಿಸಿಬಿ ಅಧಿಕಾರಿಗಳು ದಾಖಲಿಸಿದ್ದಾರೆ.

ಮಾದಕ ಜಾಲದಲ್ಲಿ ಸಂಜನಾ:
2017ರ ಅಕ್ಟೋಬರ್‍ನಲ್ಲಿ ಕೋರಮಂಗಲದ ವಾಲ್‍ಸ್ಟ್ರೀಟ್ ಕ್ಲಬ್‍ನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಸೇವಿಸಿ, ಡ್ರಗ್ಸ್ ಮಾರಾಟ ಮಾಡಿದ್ದರು. 2018ರಲ್ಲಿ ಜೇಡ್ ಗಾರ್ಡನ್‍ನಲ್ಲಿ ನಡೆದ ಬರ್ತ್‍ಡೇ ಪಾರ್ಟಿಯಲ್ಲಿ ಸಹ ಡ್ರಗ್ಸ್ ಸೇವನೆ ಮಾಡಿದ್ದರು. 2018ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ನಡೆದಿದ್ದ ವ್ಯಾಲೆಂಟೆನ್ಸ್ ಡೇ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

ನಟಿಯಾಗಿ ಉಳಿದವರಿಗೆ ಡ್ರಗ್ಸ್ ಸೇವಿಸುವಂತೆ ಸಂಜನಾ ಪ್ರಚೋದನೆ ನೀಡುತ್ತಿದ್ದರು. ಒಮ್ಮೆ ನಶೆ ಏರಿಸಿಕೊಂಡ ಬಳಿಕ ಸಾಯಿತೇಜ್ ಶೈನ್ ಅಪಾರ್ಟ್‍ಮೆಂಟ್ ಎದುರು ಸಂಜನಾ ಗಲಾಟೆ ಮಾಡಿದ್ದರು. ಡ್ರಗ್ಸ್ ಗಾಗಿ ಸಂಜನಾ ಇತರೆ ಡ್ರಗ್ ಪೆಡ್ಲರ್‍ಗಳಿಗೆ ನಿರಂತರವಾಗಿ ಕರೆ ಮಾಡುತ್ತಿದ್ದರು. ನಟ ಅಕುಲ್ ಬಾಲಾಜಿ ಸಂಜನಾ ಗಲ್ರಾನಿ ವಿರುದ್ಧವೂ ಹೇಳಿಕೆ ಕೊಟ್ಟಿದ್ದಾರೆ ಎಂಬ ಅಂಶವವನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.

ಅಜ್ಞಾತ ಸ್ಥಳದಲ್ಲಿ ರಾಗಿಣಿ, ಸಂಜನಾ
ಎಫ್‍ಎಸ್‍ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಖಚಿತ, ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ ಬೆನ್ನಲ್ಲೇ ನಟಿರಾದ ರಾಗಿಣಿ, ಸಂಜನಾ ಅಜ್ಞಾತವಾಗಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್‍ನ ನಿವಾಸದಲ್ಲಿ ರಾಗಿಣಿ ಇಲ್ಲ. ಬೆಳಗ್ಗೆಯೇ ರಾಗಿಣಿ ಹೊರಟಿದ್ದಾರೆ. ಯಾವಾಗ ಬರುತ್ತಾರೆ ಎಂಬ ಮಾಹಿತಿ ಇಲ್ಲ ಎಂದು ಸೆಕ್ಯೂರಿಟಿ ಹೇಳಿದ್ದಾರೆ.

ಸಂಜನಾ ಮೊಬೈಲನ್ನೇ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸಂಜನಾ ಮ್ಯಾನೇಜರ್ ಸಂಪರ್ಕಿಸಿದರೂ ನೋ ರೆಸ್ಪಾನ್ಸ್ ಅಂತಿದ್ದಾರೆ. ಪ್ರತಿದಿನ ಮಧ್ಯಾಹ್ನ 1 ಗಂಟೆ ಹೊತ್ತಿಗೆ ತಮ್ಮ ಮನೆಯ ಪಕ್ಕದ ಕಟ್ಟಡ ಕಾರ್ಮಿಕರಿಗೆ ಸಂಜನಾ ಊಟ ವಿತರಿಸುತ್ತಿದ್ದರು. ಇಂದು ಅಲ್ಲಿ ಊಟವನ್ನೂ ಕೊಟ್ಟಿಲ್ಲ. ಆದರೆ ಸದ್ಯ ಸಂಜನಾ ಮನೆಯಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಸಂಜನಾ ತಾಯಿ ರೇಷ್ಮಾ ಮಾತ್ರ ಕಣ್ಣೀರು ಹಾಕಿದ್ದಾರೆ. ಸಂಜನಾ ಈಗಾಗಲೇ ತುಂಬಾ ನೊಂದಿದ್ದಾರೆ. ಡ್ರಗ್ಸ್ ಸೇವನೆ, ಎಫ್‍ಎಸ್‍ಎಲ್, ಚಾರ್ಜ್‍ಶೀಟ್ ಬಗ್ಗೆ ನಮಗೇನು ಗೊತ್ತಿಲ್ಲ. ನಮ್ಮನ್ನು ಬಿಟ್ಟುಬಿಡಿ ಎಂದು ಕ್ಯಾಮೆರಾಗಳಿಗೆ ಕೈಮುಗಿದಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement