ನವದೆಹಲಿ: ಸಿಬಿಎಸ್‍ಇ 12ನೇ ತರಗತಿ ಪರೀಕ್ಷಾವಧಿ ಎರಡೂವರೆ ಗಂಟೆ ಬದಲಾಗಿ 30 ನಿಮಿಷಕ್ಕೆ ತರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಜೂನ್ 1ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲಾ ಪರೀಕ್ಷೆಯ ದಿನಾಂಕ ಮತ್ತು ಸಮಯದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಈ ಮೊದಲು ವಿದ್ಯಾರ್ಥಿಗಳು ಎರಡೂವರೆ ಗಂಟೆ ಪರೀಕ್ಷೆ ಬರೆಯುತ್ತಿದ್ದರು. ಶಿಕ್ಷಣ ತಜ್ಞರ ಸಲಹೆ ಮೇರೆಗೆ ಪರೀಕ್ಷಾ ಅವಧಿಯನ್ನು 30 ನಿಮಿಷಕ್ಕೆ ಇಳಿಸಲು ಮುಂದಾಗಿದ್ದು, ಎಲ್ಲವೂ ವಸ್ತುನಿಷ್ಠ (ಬಹುಆಯ್ಕೆ) ಪ್ರಶ್ನೆಗಳಿರಲಿವೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳಿಗೂ ಮೇ 25ರಂದು ಪರೀಕ್ಷೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿತ್ತು. ಭಾನುವಾರದ ಸಭೆಯಲ್ಲಿ ಬಹುತೇಕ ರಾಜ್ಯಗಳು ಸಿಬಿಎಸ್‍ಇ 12ನೇ ತರಗತಿ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದ್ದವು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 2 ಆಯ್ಕೆ – ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ?
ದೆಹಲಿ, ಮಹಾರಾಷ್ಟ್ರ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಮಾತ್ರ ಪರೀಕ್ಷೆ ಇಲ್ಲದೇ ಮಕ್ಕಳನ್ನು ಪಾಸ್ ಮಾಡುವ ಪ್ರಸ್ತಾವವನ್ನ ಸರ್ಕಾರದ ಮುಂದಿಟ್ಟಿದ್ದವು. ಈ ರಾಜ್ಯಗಳು ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡುವಂತೆ ಮನವಿಯನ್ನ ಮಾಡಿಕೊಂಡಿದ್ದವು. 32ರಲ್ಲಿ 29 ರಾಜ್ಯಗಳು ಕಡಿಮೆ ಅವಧಿ ಪರೀಕ್ಷೆಗೆ ಸಮ್ಮತಿ ನೀಡಿದ್ರೆ, ರಾಜಸ್ಥಾನ, ತ್ರಿಪುರ ಮತ್ತು ತೆಲಂಗಾಣ ಮಾತ್ರ ಮೊದಲಿನ ಪದ್ಧತಿಯಂತೆ ಪರೀಕ್ಷೆ ನಡೆಸುವಂತೆ ಕೇಳಿದ್ದವು.