ಬೆಂಗಳೂರು: ಗುತ್ತಿಗೆದಾರರಿಂದ ಹಣ ಸ್ವೀಕರಿಸುವಾಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಗರದ ಜಯನಗರ ಸ್ಟಾರ್ ಬಕ್ಸ್ ಕಾಫಿಯಲ್ಲಿ ನಡೆದಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿ ನಾಗೇಶ್ ಸಿಬಿಐ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಗುತ್ತಿಗೆದಾರರಿಂದ 40 ಲಕ್ಷ ರೂ. ಹಣ ಬೇಡಿಕೆ ಇಟ್ಟು 14 ಲಕ್ಷ ರೂ. ಸ್ವೀಕರಿಸುವಾಗ ಬಲೆಗೆ ಬಿದಿದ್ದಾರೆ.
Advertisement
Advertisement
ಏನಿದು ಪ್ರಕರಣ: ಗುತ್ತಿಗೆದಾರ ಶ್ರೀನಿವಾಸ್ ಎಂಬುವರ ಮನೆ ಮೇಲೆ ಮಾರ್ಚ್ 6 ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಆದರೆ ಮನೆಯಲ್ಲಿ ಸಿಕ್ಕ 40 ಲಕ್ಷ ರೂ. ಚೆಕ್ ಒಂದರ ವಿಚಾರಣೆ ನೆಪದಲ್ಲಿ ಅವರನ್ನು ಐಟಿ ಕಚೇರಿ ಆಗಮಿಸಲು ತಿಳಿಸಿದ್ದರು. ಆ ಬಳಿಕ ಕೇಸ್ ಖುಲಾಸೆ ಗೊಳಿಸಲು 40 ಲಕ್ಷಕ್ಕೆ ಬೇಡಿಕೆ ಇಟ್ಟು 14 ಲಕ್ಷ ರೂ. ಪಡೆಯಲು ಕಾಫಿ ಕೆಫೆಗೆ ಆಗಮಿಸಿದ್ದರು.
Advertisement
ಐಟಿ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟ ಕುರಿತು ಗುತ್ತಿಗೆ ದಾರ ಶ್ರೀನಿವಾಸ್ ಸ್ನೇಹಿತನ ಸಲಹೆ ಮೇರೆಗೆ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಸಿಬಿಐ ಅಧಿಕಾರಿಗಳು ಹಣ ಪಡೆಯುವ ವೇಳೆಯೇ ನಾಗೇಶ್ ರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಸಂಜೆ ಘಟನೆ ನಡೆದಿದ್ದು, ನಾಗೇಶ್‍ರನ್ನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಸಿಬಿಐ ಪೊಲೀಸರ ಮಾಹಿತಿ ಅನ್ವಯ ಮತ್ತೊಬ್ಬ ಐಟಿ ಅಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಬೇಕಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಆತ ಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆಯೂ ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.