ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ಅಂತಿಮ ತೀರ್ಪು ಶುಕ್ರವಾರ ಪ್ರಕಟವಾಗಲಿದೆ. ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠದಿಂದ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಆರಂಭದಿಂದ ಇಲ್ಲಿಯವರೆಗೆ ಯಾವ ವರ್ಷ ಏನಾಯಿತು ಎನ್ನುವುದರ ಸಮಗ್ರ ವಿವರವನ್ನು ಇಲ್ಲಿ ನೀಡಲಾಗಿದೆ.
ಕಾವೇರಿ ನದಿ ಎಲ್ಲಿದೆ? ವಿಶೇಷತೆ ಏನು?
ಕರ್ನಾಟಕದ ಜೀವನದಿ ಎಂದು ಕರೆಯಲ್ಪಡುತ್ತಿರುವ ಕಾವೇರಿ ಉಗಮಿಸುವುದು ಕೊಡಗು ಜಿಲ್ಲೆಯಲ್ಲಿ. ಮಡಿಕೇರಿಯಿಂದ 44 ಕಿ.ಮೀ ದೂರದ ತಲಕಾವೇರಿಯಲ್ಲಿ ಹುಟ್ಟುವ ಈ ನದಿ ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡು ಪ್ರವೇಶಿಸಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ದಕ್ಷಿಣದ ಗಂಗೆ ಎಂದು ಕರೆಯಿಸಿಕೊಳ್ಳುವ ಈ ನದಿಯ ಒಟ್ಟು ಉದ್ದ 765 ಕಿಲೋ ಮೀಟರ್. ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಥ ಮತ್ತು ಲೋಕಪಾವನಿ ಉಪನದಿಗಳನ್ನು ಹೊಂದಿರುವ ಕಾವೇರಿಯನ್ನು ಕೊಡಗರು ತಮ್ಮ ಕುಲ ದೇವತೆ ಎಂದು ಪೂಜಿಸುತ್ತಾರೆ. ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದಾಗಿರುವ ಕಾವೇರಿ ದಕ್ಷಿಣದಲ್ಲಿ ಹರಿಯುವ ಏಕೈಕ ಮಹಾನದಿ ಎಂದೂ ಕರೆಯಿಸಿಕೊಂಡಿದೆ. ತುಲಾ ಮಾಸದಲ್ಲಿ ಕಾವೇರಿ ಸ್ನಾನ ಮಾಡಿಕೊಂಡರೆ ಸಖಲ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯೂ ಇದೆ.
Advertisement
Advertisement
ಮೂರು ರಾಜ್ಯದಲ್ಲಿ ಕಾವೇರಿ ಹೀಗೆ ಹರಿಯುತ್ತದೆ:
ಕೊಡಗಿನ ತಲಕಾವೇರಿಯಲ್ಲಿ ಉಗಮಗೊಂಡ ಬಳಿಕ ರಾಜ್ಯದಲ್ಲಿ ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಹರಿಯುತ್ತದೆ ಬಳಿಕ ಕೇರಳ, ತಮಿಳುನಾಡು ಹಾಗೂ ಪುದುಚೇರಿ ಮೂಲಕ ಹಿಂದೂ ಮಹಾಸಾಗರ ಸೇರುತ್ತದೆ.
Advertisement
ರಾಜ್ಯದಲ್ಲಿ ಕಾವೇರಿ ಹರಿಯೋದು ಹೀಗೆ..!
ಕಾವೇರಿ ನದಿ ಕೊಡಗಿನಲ್ಲಿ ಹುಟ್ಟಿ, ಮೈಸೂರು ಮೂಲಕ ತಮಿಳುನಾಡಿಗೆ ಹರಿದರೂ ಹಾಸನ ಜಿಲ್ಲೆಯಲ್ಲಿ ಸುಮಾರು 20 ಕಿಲೋ ಮೀಟರ್ ಹರಿಯುತ್ತದೆ. ಕೊಡಗಿನ ಕುಶಾಲನಗರ, ಕೂಡಿಗೆಯ ಮೂಲಕ ಹರಿಯುವ ನದಿ ಶಿರಂಗಾಲ ತಲುಪುತ್ತದೆ. ನಂತರ ಅರಕಲಗೂಡು ತಾಲೂಕಿನ ಗಡಿ ಗ್ರಾಮವಾದ ಕಡವಿನ ಹೊಸಹಳ್ಳಿಯ ಮುಖಾಂತರ ಹಾಸನ ಜಿಲ್ಲೆಗೆ ಪ್ರವೇಶ ಮಾಡುತ್ತದೆ. ಇದಾದ ಬಳಿಕ ಕೊಣನೂರು, ರಾಮನಾಥಪುರ ಹಾಗೂ ಕಟ್ಟೇಪುರಗಳಲ್ಲಿ ಹರಿದು ಕೇರಳಾಪುರದ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸುತ್ತದೆ. ಕಾವೇರಿಗೆ ಮೊದಲ ಕಟ್ಟೆಯನ್ನು ಹಾಸನ ಜಿಲ್ಲೆಯ ಅರಕಲಗೂಡಿನ ಕಟ್ಟೆಪುರ ಗ್ರಾಮದ ಬಳಿ ನಿರ್ಮಾಣ ಮಾಡಲಾಗಿದೆ.
Advertisement
ಕಾವೇರಿಗೆ ಮೊದಲು ಅಣೆಕಟ್ಟು ಕಟ್ಟಿದ್ದು ಯಾರು?
ಭಾರತದಲ್ಲೇ ಮೊಟ್ಟ ಮೊದಲ ಅಣೆಕಟ್ಟು ನಿರ್ಮಾಣವಾಗಿದ್ದು ಕಾವೇರಿ ನದಿಗೆ ಎನ್ನುವುದು ವಿಶೇಷ. ಚೋಳ ಸಾಮ್ರಾಜ್ಯದ ರಾಜ ಕರಿಕಾಲ ಚೋಳ 1068 ರಲ್ಲಿ ತಮಿಳುನಾಡಿನ ಕಲ್ಲಣೈ ಎಂಬಲ್ಲಿ ಅಣೆಕಟ್ಟು ಕಟ್ಟಿಸಿದ್ದು ಈಗ ಈ ಅಣೆಕಟ್ಟು ಆಧುನಿಕರಣಗೊಂಡಿದೆ.
ಕಾವೇರಿ ವಿವಾದ ಆರಂಭವಾಗಿದ್ದು ಯಾವಾಗ?
ಕಾವೇರಿ ವಿವಾದದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ವೈಮನಸ್ಯ ಇಂದು ನಿನ್ನೆಯದಲ್ಲ. ಕಾವೇರಿ ವಿವಾದಕ್ಕೆ ಶತ ಶತಮಾನಗಳ ಇತಿಹಾಸವಿದೆ. ಇದರ ಮೂಲ ಹುಡುಕಿದರೆ ಚೋಳರ ಕಾಲದವರೆಗೂ ಹೋಗುತ್ತದೆ. 1146-1173ರ ಅವಧಿಯಲ್ಲಿ ಒಂದನೇ ನರಸಿಂಹ ಕಾವೇರಿ ನದಿಗೆ ನಿರ್ಮಿಸಿದ್ದ ತಡೆಗೋಡೆಯನ್ನು ರಾಜರಾಜ ಚೋಳ ಕೆಡವಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದ.
1892ರಲ್ಲಿ ಮೊದಲ ಒಪ್ಪಂದ:
ಕಾವೇರಿಯ ಮೊದಲ ಒಪ್ಪಂದ ಆದರೆ ಇದು ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದ್ದು 17-18 ನೇ ಶತಮಾನದಲ್ಲಿ. 1876-78 ರಲ್ಲಿ ಉಂಟಾದ ಭೀಕರ ಕ್ಷಾಮ ತಲೆದೋರಿದಾಗ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆಕಟ್ಟೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಮುಂದಾದರು. ಈ ಯೋಜನೆಗೆ 1890ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ನಮ್ಮ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದರು. ಇದರ ಫಲವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು. ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.
ಎಲ್ಲಿಯ ವೇದಾವತಿ, ಅದೆಲ್ಲಿಯ ಕಾವೇರಿ..?
ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ಪ್ರದೇಶವಿದೆ. ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನಕ್ಕೊಳಗಾಗಿತ್ತು. ಇಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಅಗತ್ಯ ಈ ಕಾರಣ ಮುಂದಿಟ್ಟು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.
ಬ್ರಿಟಿಷರ ಕಾಲದಲ್ಲಿ ಕೆಆರ್ ಎಸ್ ನಿರ್ಮಾಣವಾಗಿದ್ದು ಹೇಗೆ?
ಬ್ರಿಟಿಷರ ಅಳ್ವಿಕೆ ಅವಧಿಯಲ್ಲಿ ನೀರನ್ನು ಸಂಗ್ರಹಿಸುವ ದೃಷ್ಟಿಯನ್ನು ಇಟ್ಟುಕೊಂಡು ಎರಡೂ ಪ್ರಭುತ್ವಗಳು 1910ರಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾದವು. ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಅವಧಿಯಲ್ಲಿ 1911ರಲ್ಲಿ ಕೃಷ್ಣ ರಾಜ ಸಾಗರ ಅಣೆಕಟ್ಟು ನಿರ್ಮಾಣದ ಯೋಜನೆ ಆರಂಭಗೊಂಡು 1938ರಲ್ಲಿ ಮುಕ್ತಯವಾಯಿತು.
1924ರಲ್ಲಿ ಎರಡನೇ ಒಪ್ಪಂದ ಯಾಕೆ ನಡೆಯಿತು?
1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಮೈಸೂರು ಸಂಸ್ಥಾನ ಕೆಲಸ ಮುಂದುವರೆಸಿತು. ಆದರೂ 1892ರ ಒಪ್ಪಂದದಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿತು. ಬ್ರಿಟಿಷರು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ಪ್ರಾಂತ್ಯ ಲಂಡನ್‍ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್‍ಗೆ ಮೇಲ್ಮನವಿ ಸಲ್ಲಿಸಿತು. ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲವಾದರೂ 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು.
1924ರ ಒಪ್ಪಂದದಲ್ಲಿ ಏನಿತ್ತು?
ಈ ಒಪ್ಪಂದ ಪ್ರಕಾರ ಕಾವೇರಿ ಜಲನಯದ ಪ್ರದೇಶದಲ್ಲಿ ಒಟ್ಟು 868 ಟಿಎಂಸಿ ನೀರು ಲಭ್ಯವಿದೆ ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನದಂತೆ ಶೇ.75ರಷ್ಟು ಭಾಗ(651 ಟಿಎಂಸಿ) ತಮಿಳುನಾಡು ಮತ್ತು ಪುದುಚೇರಿಗೆ, ಕರ್ನಾಟಕಕ್ಕೆ ಶೇ.23(200 ಟಿಎಂಸಿ) ಕೇರಳಕ್ಕೆ ಶೇ.2(17.36) ಟಿಎಂಸಿ ನೀರನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಅಷ್ಟೇ ಅಲ್ಲದೇ ಕೆಆರ್ ಎಸ್ ನಿರ್ಮಾಣಕ್ಕೆ ಮದ್ರಾಸ್ ಪ್ರಾಂತ್ಯ ವಿರೋಧ ವ್ಯಕ್ತಪಡಿಸಿದ ಕಾರಣ ಮೆಟ್ಟೂರಿನಲ್ಲಿ ಕಾವೇರಿಗೆ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಿತು. ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ಈ ವೇಳೆ ನಿರ್ಬಂಧಗಳನ್ನು ವಿಧಿಸಿತ್ತು. ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು ಎನ್ನುವ ಷರತ್ತನ್ನು ವಿಧಿಸಲಾಗಿತ್ತು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರಿನಲ್ಲಿ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು.
ಒಪ್ಪಂದ ಬ್ರೇಕ್ ಮಾಡಿದ ತಮಿಳುನಾಡು
1924ರ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ತಮಿಳುನಾಡು ತನ್ನ ಕರಾರನ್ನು ಮೀರಿ 18 ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಅಷ್ಟೇ ಅಲ್ಲದೇ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು. ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು. ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ರಾಜ್ಯ ನ್ಯಾಯಾಲಯಕ್ಕೆ ಹೋಯಿತು. ಆದರೆ 3 ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಖಟ್ಲೆಯನ್ನು ಹಿಂಪಡೆಯಲಾಯಿತು.
ಸತ್ಯಶೋಧಕ ಸಮಿತಿ ರಚನೆಯಾಗಿದ್ದು ಹೇಗೆ?
ಎರಡು ರಾಜ್ಯಗಳು ನೀರಿಗಾಗಿ ಗಲಾಟೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ 1972 ಕೇಂದ್ರ ಸರ್ಕಾರ ಕಾವೇರಿ ಸತ್ಯಶೋಧನಾ ಸಮಿತಿಯನ್ನು ರಚಿಸಿತು. ಅದೇ ವರ್ಷ ಸಮಿತಿ ವರದಿ ಸಲ್ಲಿಸಿತ್ತು. ಈ ಸಮಿತಿಯು ಕಾವೇರಿ ಕೊಳ್ಳದಲ್ಲಿ 868 ಟಿ.ಎಮ್‍ಸಿಅಡಿ ನೀರು ಲಭ್ಯವಿದೆ. ಈ ನೀರಿನಲ್ಲಿ ತಮಿಳುನಾಡು 566 ಟಿಎಂಸಿ, ಕರ್ನಾಟಕ 177 ಟಿಎಂಸಿ ಅಡಿ ಬಳಸುತ್ತದೆ. ಅಷ್ಟೇ ಅಲ್ಲದೇ 125 ಟಿಎಂಸಿ ನೀರು ಉಳಿಯುತ್ತದೆ ಎಂದು ವರದಿ ನೀಡಿದರು. ಆದರೆ 1973ರಲ್ಲಿ ತಮಿಳುನಾಡು ಈ ವರದಿಯನ್ನು ತಿರಸ್ಕರಿಸಿತು.
ನ್ಯಾಯಾಧಿಕರಣ ರಚನೆಗೆ ಕಾರಣ ಏನು?
ಸತ್ಯ ಶೋಧಕ ವರದಿ ತಿರಸ್ಕೃತಗೊಂಡ ಬಳಿಕವೂ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಲೇ ಇತ್ತು. ತಮಿಳುನಾಡು ತಂಜಾವೂರು ರೈತರ ಸಂಘ 1986 ರಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ಈ ವಿವಾದ ಬಗೆ ಹರಿಸಲು ನ್ಯಾಯಮಂಡಳಿ ರಚಿಸಬೇಕೆಂದು ಅರ್ಜಿ ಹಾಕಿತು. ವಿಚಾರಣೆ ನಡೆಸಿದ ಕೋರ್ಟ್ ಎರಡೂ ರಾಜ್ಯಗಳ ಪರಸ್ಪರ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಿ ಎಂದು ಸೂಚಿಸಿತು. ಆದರೆ ಎರಡೂ ರಾಜ್ಯಗಳ ನಡುವೆ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 1990ರಲ್ಲಿ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರಕ್ಕೆ ಆದೇಶಿಸಿತು. ಈ ಆದೇಶದ ಅನ್ವಯದಂತೆ ಕೇಂದ್ರ ಸರ್ಕಾರ 1990 ಜೂನ್ 2ರಂದು ಕಾವೇರಿ ನ್ಯಾಯಾಧಿಕರಣವನ್ನು ರಚಿಸಿತು.
ಮಧ್ಯಂತರ ಐತೀರ್ಪು; ಸುಗ್ರಿವಾಜ್ಞೆ ಹೊರಡಿಸಿದ ಸಿಎಂ ಬಂಗಾರಪ್ಪ:
1980ರಿಂದ 1990ರವರೆಗಿನ 10 ವರ್ಷದ ನೀರಿನ ಒಳಹರಿವನ್ನು ಲೆಕ್ಕ ಹಾಕಿ ಕಾವೇರಿ ನ್ಯಾಯಾಧಿಕರಣ 1991ರ ಜೂನ್ 25ರಂದು ಪ್ರತಿವರ್ಷ 205 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಮಧ್ಯಂತರ ಐತೀರ್ಪು(ನ್ಯಾಯಾಲಯಗಳು ವಿಚಾರಣೆ ನಡೆಸಿ ತೀರ್ಪು ನೀಡಿದರೆ, ನ್ಯಾಯಮಂಡಳಿಗಳು ವಿಚಾರಣೆ ನಡೆಸಿ ನೀಡುವ ಮಧ್ಯಂತರ/ಅಂತಿಮ ತೀರ್ಪಿಗೆ ಐತೀರ್ಪು ಎಂದು ಕರೆಯಲಾಗುತ್ತದೆ) ನೀಡಿತು. ಇದರ ಜೊತೆ ಈಗ ಇರುವ ನೀರಾವರಿ ಭೂ ಪ್ರದೇಶವನ್ನು ಹೆಚ್ಚಿಸದೇ ಇರಲು ಆದೇಶಿತು. ಆದರೆ ಈ ಆದೇಶವನ್ನು ಎರಡೂ ರಾಜ್ಯದ ಜನರು ವಿರೋಧಿಸಿದರು. ಭಾರೀ ಪ್ರತಿಭಟನೆಗಳು ನಡೆಯಿತು. ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ಐತೀರ್ಪನ್ನು ತಿರಸ್ಕರಿಸಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಘೋಷಿಸಿದರು. ಅಷ್ಟೇ ಐತೀರ್ಪು ಅಕ್ರಮ ಎಂದು ಸುಗ್ರೀವಾಜ್ಞೆಯನ್ನು ಹೊರಡಿಸಿದರು. ಈ ವೇಳೆ ಕರ್ನಾಟಕದಲ್ಲಿ ಭಾರೀ ಗಲಾಟೆ ನಡೆಯಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿ ಮಧ್ಯಂತರ ಐತೀರ್ಪಿನಂತೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತು.
ಐತೀರ್ಪಿನ ಆದೇಶವನ್ನು ಪಾಲಿಸಲೇಬೇಕೇ?
ಐತೀರ್ಪಿನ ಆದೇಶಗಳನ್ನು ಸರ್ಕಾರ ಪಾಲಿಸಬಹುದು ಅಥವಾ ಪಾಲಿಸದೇ ಇರಲೂಬಹುದು. ಆದರೆ ಸುಪ್ರೀಂ ನೀಡಿದ ಆದೇಶವನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಪಾಲಿಸದೇ ಇದ್ದರೇ ಅದು ನ್ಯಾಯಾಂಗ ನಿಂದನೆ ಎಣಿಸಿಕೊಳ್ಳುತ್ತದೆ.
ಕೇಂದ್ರದ ಮಧ್ಯಪ್ರವೇಶ:
1995ರಲ್ಲಿ ಕರ್ನಾಟಕದಲ್ಲಿ ಮಳೆ ಕಡಿಮೆಯಾದ ಕಾರಣ ಮಧ್ಯಂತರ ಆದೇಶವನ್ನು ಪಾಲಿಸಲು ಸಾಧ್ಯವಾಗಲಿಲ್ಲ. ಈ ವೇಳೆ ತಮಿಳುನಾಡು 30 ಟಿಎಂಸಿ ನೀರಿನ ಬೇಡಿಕೆ ಇಟ್ಟುಕೊಂಡು ಸುಪ್ರೀಂ ಮೊರೆ ಹೋಯಿತು. ಎರಡೂ ರಾಜ್ಯಗಳ ತಮ್ಮ ಪಟ್ಟನ್ನ ಬಿಡದ ಕಾರಣ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಮಧ್ಯಪ್ರವೇಶಿಸುವಂತೆ ಸೂಚಿಸಿತು. ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಂಧಾನ ಮಾಡಿ ಸಮಸ್ಯೆಯನ್ನು ಬಗೆ ಹರಿಸಿದರು. 1998ರಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳಿರುವ ಕಾವೇರಿ ನದಿ ಪ್ರಾಧಿಕಾರವನ್ನು ರಚಿಸಿತು.
ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10,ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು.
ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು.
2013ರಲ್ಲಿ ಅಧಿಸೂಚನೆ ಪ್ರಕಟ
ಐತೀರ್ಪಿನ ಆದೇಶದ ಅನ್ವಯ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕಿತ್ತು. ಆದರೆ ತೀರ್ಪು ಬಂದು 5 ವರ್ಷ ಕಳೆದರೂ ನಿರ್ವಹಣಾ ಮಂಡಳಿಯನ್ನು ರಚಿಸದ್ದಕ್ಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ಫೆ.20ರ ಒಳಗಡೆ ಅಂತಿಮ ಆದೇಶವನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಬೇಕೆಂದು 2013ರ ಫೆ.4ರಂದು ಖಡಕ್ ಆದೇಶವನ್ನು ಹೊರಡಿಸಿತು. ಈ ಆದೇಶದ ಅನ್ವಯ ಅಂತಿಮವಾಗಿ ಕೇಂದ್ರ ಸರ್ಕಾರ ಫೆ.19ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತು.
ವಿಶೇಷ ಮೇಲ್ಮನವಿ ವಿಚಾರಣೆ ಆರಂಭ
ಕಾವೇರಿ ನಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಮೊರೆ ಹೋಗಿತ್ತು. ಈ ವಿಶೇಷ ಮೇಲ್ಮನವಿಯ ಅರ್ಜಿಯ ವಿಚಾರಣೆ 2016ರ ಅಕ್ಟೋಬರ್ 18ರಿಂದ ಆರಂಭವಾಗಿ 2017ರ ಸೆಪ್ಟೆಂಬರ್ 20ಕ್ಕೆ ಅಂತ್ಯವಾಗಿತ್ತು. ಸುಪ್ರೀಂ ಈ ಅರ್ಜಿಯ ವಿಚಾರಣೆಗಾಗಿ ನ್ಯಾ.ದೀಪಕ್ ಮಿಶ್ರಾ, ನ್ಯಾ. ಅಮಿತ್ ರಾಯ್, ಎ.ಎಂ ಖಾನ್ವಿಲ್ಕಾರ್ ಅವರ ತ್ರಿಸದಸ್ಯ ಪೀಠ ರಚಿಸಿತ್ತು. ಇದನ್ನೂ ಓದಿ: ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ
2016 ಸೆಪ್ಟೆಂಬರ್ ನಲ್ಲಿ ಏನಾಯ್ತು?
ಹಂಚಿಕೆ ಅನುಸಾರವಾಗಿ ಕರ್ನಾಟಕ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‍ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರಾ, ನ್ಯಾ. ಲಲಿತ್ ಉದಯ್‍ರಿದ್ದ ದ್ವಿಸದ್ಯ ಪೀಠ ಸೆ.15ರಂದು ಮುಂದಿನ 10 ದಿನಗಳ ಕಾಲ ಪ್ರತಿದಿನ 15 ಸಾವಿರ ಟಿಎಂಸಿ ನೀರು ಹರಿಸುವಂತೆ ಆದೇಶಿಸಿತು. ಈ ಆದೇಶ ಪ್ರಕಟಗೊಂಡ ಬಳಿಕ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆ ನಡೆಯಿತು. ಸಾಕಷ್ಟು ಆಸ್ತಿ ಪಾಸ್ತಿ ನಷ್ಟವಾಯಿತು. ಬೆಂಗಳೂರಿನ ನಡೆದ ಪ್ರತಿಭಟನೆ ವೇಳೆ ಇಬ್ಬರು ಮೃತಪಟ್ಟರು. ಇದಾದ ಬಳಿಕ ಸೆ. 20ರ ವಿಚಾರಣೆ ವೇಳೆ 21ರಿಂದ 27ರವರೆಗೆ ಪ್ರತಿ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿತು. ಅಷ್ಟೇ ಅಲ್ಲದೇ 4 ವಾರದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು.
ನಮ್ಮಲ್ಲೇ ಬರ ಇದ್ದಾಗ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಎಂದು ಗೊಂದಲದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೆ. 23ರಂದು ತುರ್ತು ವಿಶೇಷ ಅಧಿವೇಶನ ಕರೆಯಿತು. ಈ ಅಧಿವೇಶನದಲ್ಲಿ ರಾಜ್ಯದ ಕಾವೇರಿ ಕೊಳ್ಳದ 4 ಜಲಾಶಯದಲ್ಲಿರುವುದು 27.6 ಟಿಎಂಸಿ ನೀರು. ಹೀಗಾಗಿ ಕುಡಿಯುವ ನೀರಿನ ಬಳಕೆಯ ಉದ್ದೇಶಕ್ಕಾಗಿ ಈ ನೀರನ್ನು ಬಳಸುತ್ತೇವೆ. ಬೇರೆ ಯಾವುದೇ ಕಾರಣಕ್ಕೆ ನೀರನ್ನು ಬಳಸದೇ ಇರುವ ನಿರ್ಣಯವನ್ನು ಕೈಗೊಂಡಿತು. ಸೆ. 27ರ ವಿಚಾರಣೆ ವೇಳೆ ಸೆ.30ರವರೆಗೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಆದೇಶಿಸಿತು. ಸೆ.30ರ ವಿಚಾರಣೆಗೆ ಹಾಜರಾದ ಕೇಂದ್ರದ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸಿದ್ಧವಿದೆ ಎಂದು ತಿಳಿಸಿದರು. ಅಟಾರ್ನಿ ಜನರಲ್ ಈ ರೀತಿ ಹೇಳಿದ್ದೇ ತಡ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಯಿತು. ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು. ನಂತರ ಅಟಾರ್ನಿ ಜನರಲ್ ತುರ್ತು ಮರು ಪರಿಶೀಲನಾ ಅರ್ಜಿ ಸಲ್ಲಿಸಿ ಆದೇಶವನ್ನು ಮರು ಪರಿಶೀಲಿಸಬೇಕೆಂದು ಮನವಿ ಮಾಡಿದರು. ಅ.3ರಂದು ವಿಶೇಷ ಅಧಿವೇಶನದಲ್ಲಿ ಕುಡಿಯುವುದಕ್ಕೆ ಮತ್ತು ಕಾವೇರಿ ಕೊಳ್ಳದ ಬೆಳೆಗಳಿಗೆ ನೀರು ಬಿಡಲು ತೀರ್ಮಾನ ಕೈಗೊಳ್ಳಲಾಯಿತು. ಅಕ್ಟೋಬರ್ 4ರಂದು ನಡೆದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಕಾವೇರಿ ನ್ಯಾಯ ಮಂಡಳಿ ನೇಮಿಸಲು ಕೇಂದ್ರಕ್ಕೆ ಮಾತ್ರ ಅಧಿಕಾರವಿದೆ ಎಂದು ಅಟಾರ್ನಿ ಜನರಲ್ ವಾದಿಸಿದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಕಾವೇರಿ ಕೊಳ್ಳದ ಅಧ್ಯಯನಕ್ಕೆ ತಾಂತ್ರಿಕ ತಂಡವನ್ನು ಕಳುಹಿಸಿಕೊಡಬೇಕು ಕೇಂದ್ರಕ್ಕೆ ಸೂಚಿಸಿ 12 ದಿನಗಳ ಕಾಲ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿತು. ಇದನ್ನೂ ಓದಿ: ಕಾವೇರಿ ನಿರ್ವಹಣಾ ಮಂಡಳಿಯ ಕೆಲಸ ಏನು?ನಿರ್ವಹಣಾ ಮಂಡಳಿಯ ಸ್ವರೂಪ ಏನು?
ಜಯಲಲಿತಾಗೆ ಕರ್ನಾಟಕದ ಮೇಲೆ ಮುನಿಸು ಇತ್ತಾ?
ತಮಿಳುನಾಡಿನ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಕಾವೇರಿ ಕ್ಯಾತೆ ಇದ್ದದ್ದೆ. ಅದು ಡಿಎಂಕೆ ಇರಲಿ ಎಐಎಡಿಎಂಕೆ ಇರಲಿ ಕರ್ನಾಟಕದ ಜೊತೆ ಕ್ಯಾತೆ ನಡೆಯುತ್ತಲೇ ಬಂದಿದೆ. 1991-96, 2001-06, 2011-16 ಮತ್ತು 2016ರ ಎಐಡಿಎಂಕೆ ಜಯಗಳಿಸಿತ್ತು. ಹೀಗಾಗಿ ಅಮ್ಮನ ಅಳ್ವಿಕೆಯಲ್ಲಿ ಮುಂದುವರೆದಿತ್ತು ಅಷ್ಟೇ. ಇದು ಒಂದು ಕಾರಣವಾದರೆ ಇನ್ನೊಂದು ಜಯಾ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 2003ರಲ್ಲಿ ತಮಿಳುನಾಡಿನಲ್ಲಿದ್ದ ಡಿಎಂಕೆ ಪಕ್ಷ ಈ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸುವಂತೆ ಸುಪ್ರೀಂನಲ್ಲಿ ಮನವಿ ಮಾಡಿತು. ಈ ಮನವಿಯನ್ನು ಮಾನ್ಯ ಮಾಡಿದ ಕೋರ್ಟ್ ಜಯಾ ಪ್ರಕರಣದ ವಿಚಾರಣೆಗೆ ಕರ್ನಾಟಕದಲ್ಲಿ ನಡೆಸಬೇಕು ಇದಕ್ಕಾಗಿ ವಿಶೇಷ ಕೋರ್ಟ್ ಸ್ಥಾಪಿಸಬೇಕೆಂದು ಆದೇಶಿಸಿತು. ಈ ಪ್ರಕರಣದಲ್ಲಿ ಕರ್ನಾಟಕ ಪ್ರತಿವಾದಿ ಆಯಿತು. ಈ ಕಾರಣಕ್ಕಾಗಿ ಜಯಲಿತಾಗಿ ಕರ್ನಾಟಕದ ಮೇಲೆ ಮುನಿಸು ಬಂದಿರಬಹುದು ಎಂದು ವಿಶ್ಲೇಷಿಸಲಾಗುತ್ತದೆ.
ಯಾವ ವರ್ಷ ಎಷ್ಟು ನೀರು ತಮಿಳುನಾಡಿಗೆ ಹೋಗಿದೆ?
1991ರ ಮಧ್ಯಂತರ ಐತೀರ್ಪಿನ ಪ್ರಕಾರ ತಮಿಳುನಾಡಿಗೆ 210 ಟಿಎಂಸಿ ನೀರು ಹರಿಸಬೇಕಿದ್ದರೂ ಕರ್ನಾಟಕ ಕೆಲ ವರ್ಷಗಳನ್ನು ಬಿಟ್ಟರೆ ಮಳೆ ಅಧಿಕವಾದ ಸಮಯದಲ್ಲಿ ಹೆಚ್ಚು ನೀರನ್ನು ಹರಿಸಿದೆ. 1991-92ರಲ್ಲಿ 340, 1992-93 ರಲ್ಲಿ 358, 1993-94ರಲ್ಲಿ 230, 1994-95ರಲ್ಲಿ 394, 1995-96ರಲ್ಲಿ 195, 1996-97ರಲ್ಲಿ 245, 1998-99ರಲ್ಲಿ 260, 1999-2000ರಲ್ಲಿ 273, 2000-01ರಲ್ಲಿ 319, 2001-02ರಲ್ಲಿ 192, 2002-03ರಲ್ಲಿ 109, 2003-04ರಲ್ಲಿ 75, 2004-05ರಲ್ಲಿ 183, 2005-06ರಲ್ಲಿ 383 ಟಿಎಂಸಿ ನೀರು ಹರಿಸಿದೆ.
2007ರಲ್ಲಿ ನ್ಯಾಯಾಧಿಕರಣ 192 ಟಿಎಂಸಿ ನೀರನ್ನು ಹರಿಸುವಂತೆ ಆದೇಶಿಸಿತು. ಈ ಪ್ರಕಾರವಾಗಿ 2006-07ರಲ್ಲಿ 258, 2007-08 ರಲ್ಲಿ 353, 2007-08 ರಲ್ಲಿ 210, 2009-10ರಲ್ಲಿ 222, 2010-11ರಲ್ಲಿ 211, 2011-12 240, 2012- 13 100, 2013-14ರಲ್ಲಿ 259 ಟಿಎಂಸಿ, 2014-15ರಲ್ಲಿ 229, 2015-16ರಲ್ಲಿ 152 ಟಿಎಂಸಿ ನೀರನ್ನು ಹರಿಸಿದ್ದೇವೆ. 2016 ಸಪ್ಟೆಂಬರ್ ವರೆಗೆ 53.2 ಟಿಎಂಸಿ ನೀರು ತಮಿಳುನಾಡಿಗೆ ಹೋಗಿತ್ತು.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನೂ ಓದಿ: ಕಾವೇರಿ ನದಿ ನೀರು ಹಂಚಿಕೆ ವಿವಾದ – ಶುಕ್ರವಾರವೇ ತೀರ್ಪು ಪ್ರಕಟವಾಗುತ್ತಿರುವುದು ಯಾಕೆ?
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secon ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ