Connect with us

Karnataka

ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ

Published

on

Share this

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿ ಏಪ್ರಿಲ್ 11 ರೊಳಗೆ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನ್ಯಾ. ದೀಪಕ್ ಮಿಶ್ರಾ, ನ್ಯಾ. ಅಮಿತವ್ ರಾಯ್, ನ್ಯಾ. ಎಂ. ಖಾನ್ವಿಲ್ಕರ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ಆರಂಭವಾಯಿತು. ಎರಡೂ ಕಡೆಯ ವಾದ ಆಲಿಸಿದ ನ್ಯಾಯ ಪೀಠ ಮಾರ್ಚ್ 21ಕ್ಕೆ ವಿಚಾರಣೆ ಮುಂದೂಡಿತು.

ವಾದ ಹೀಗಿತ್ತು:
ಮೊದಲು ವಾದ ಆರಂಭಿಸಿದ ಕರ್ನಾಟಕ ಪರ ಫಾಲಿ ನಾರಿಮನ್ 1799 ರಲ್ಲಿಂದಲೇ ಕಾವೇರಿ ವಿವಾದ ಶುರುವಾಗಿದೆ. ಮದ್ರಾಸು ಸರ್ಕಾರ, ಮೈಸೂರು ಸಂಸ್ಥಾನ ಹಾಗೂ ಬ್ರಿಟಿಷ್ ಸರ್ಕಾರದ ನಡುವೆ ಹಲವು ಒಪ್ಪಂದಗಳಾಗಿವೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಅಂದಿನಿಂದ ಇಂದಿನ ತನಕ ನಡೆದ ಎಲ್ಲ ಪ್ರಮುಖ ಬೆಳವಣಿಗೆ ಗಳನ್ನು ಪೀಠದ ಗಮನಕ್ಕೆ ನಾರಿಮನ್ ತಂದರು.

ನಾರಿಮನ್ ವಾದ ಆಲಿಸಿದ ನ್ಯಾ.ದೀಪಕ್ ಮಿಶ್ರಾ ಒಪ್ಪಂದ ಗಳ ಬಗ್ಗೆ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ ವಾದ ಮಂಡಿಸಲು ಅವಕಾಶ ನೀಡಿದರು. ಈ ವೇಳೆ ನಾಫಡೆ ನಮಗೆ ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯಧಿಕರಣದಿಂದ ಅನ್ಯಾಯ ಆಗಿದೆ. ಕಾವೇರಿ ಕರ್ನಾಟಕ ದಲ್ಲಿ ಹುಟ್ಟಿದ್ರೆ ಎಲ್ಲ ನೀರು ಕರ್ನಾಟಕ ಕ್ಕೆ ನೀಡಬೇಕೇ? ಕೆಳಗಿನ ಪ್ರದೇಶದವರು ಏನು ಮಾಡಬೇಕು? ನಮ್ಮ ಜನರಿಗೂ ಕುಡಿಯುವ ನೀರು ಬೇಕು ಮತ್ತೆ ನಿರ್ವಹಣಾ ಮಂಡಳಿಗೆ ಆದ್ಯತೆ ಕೊಡಿ ಎಂದು ಮನವಿ ಮಾಡಿಕೊಂಡರು.

ನ್ಯಾ. ಮಿಶ್ರಾ ಸದ್ಯಕ್ಕೆ ಹಂಚಿಕೆಯಾದಂತೆ ನೀರು ಹರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಎರಡು ಕಡೆಯ ವಕೀಲರು ಸಮ್ಮತಿ ಸೂಚಿಸಿದರು. ಈ ವೇಳೆ ನಾರಿಮನ್ 1892, 1924ರ ವೇಳೆ ಆದ ಜಲ ಒಪ್ಪಂದ ಬೇಡ, ನ್ಯಾಯಾಧಿಕರಣ ನೀರು ಹಂಚಿಕೆ ತೀರ್ಪು ಸಹ ಬೇಡ. 1956 ಕಾಯ್ದೆಯ ಅಂತರಾಜ್ಯ ನೀರು ಹಂಚಿಕೆ ಪ್ರಕಾರ ನೀರು ಹಂಚಿಕೆ ಆಗಬೇಕು ಎಂದು ಕೇಳಿಕೊಂಡರು. ಎರಡು ಕಡೆಯ ವಾದವನ್ನು ಆಲಿಸಿದ ಪೀಠ ಬ್ರಿಟಿಷರ ಕಾಲದ ಒಪ್ಪಂದಗಳ ಬಗ್ಗೆ ಈ ಕೆಳಗಿನಂತೆ ಪ್ರಶ್ನೆ ಕೇಳಿತು.

ಸುಪ್ರೀಂ ಪ್ರಶ್ನೆಗಳು
– ಮೈಸೂರು ಪ್ರಾಂತ್ಯ, ಮದ್ರಾಸ್ ಸರ್ಕಾರದ ನಡುವಿನ ಒಪ್ಪಂದಕ್ಕೆ ಸಿಂಧುತ್ವ ಇದೆಯೇ?
– ಬ್ರಿಟಿಷ್ ಕಾಲದ ಒಪ್ಪಂದಗಳು ಈಗಲೂ ಹೇಗೆ ಜಾರಿಯಲ್ಲಿವೆ?
– ಒಪ್ಪಂದಗಳನ್ನು ಈಗಲೂ ಮುಂದುವರೆಸಲು ಕಾರಣವೇನು?
– ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ? ಬೇಡವೇ?
– ಬ್ರಿಟೀಷ್ ಒಪ್ಪಂದಗಳನ್ನು ನ್ಯಾಯಾಧಿಕರಣ ಒಪ್ಪಿಕೊಂಡಿದ್ದು ಹೇಗೆ?

ಈ ಅಂಶಗಳನ್ನು ಮತ್ತು ನ್ಯಾಯಾಧಿಕರಣ ಯಾವ ಅಂಶ ಆಧರಿಸಿ ತೀರ್ಪು ನೀಡಿದೆ ಎನ್ನುವುದನ್ನು ಪರಿಶೀಲಿಸಿ ಮುಂದಿನ ವಿಚಾರಣೆಯನ್ನು ನಡೆಸಲಾಗುವುದು ಎಂದು ಪೀಠ ತಿಳಿಸಿತು. ಕರ್ನಾಟಕದ ಪರ ಅನಿಲ್ ದಿವಾನ್, ಮೋಹನ್ ಕಾತರಕಿ, ಎಸ್ ಎಸ್ ಜವಳಿ, ಎಜಿ ಮಧುಸೂದನ್ ನಾಯಕ್, ಬ್ರಿಜೆಶ್ ಕಾಳಪ್ಪ ಕೋರ್ಟ್ ಕಲಾಪದಲ್ಲಿ ಉಪಸ್ಥಿತರಿದ್ದರು.

1892ರಲ್ಲಿ ನಡೆದ ಒಪ್ಪಂದದಲ್ಲಿ ಏನಿತ್ತು?
1876-78 ರಲ್ಲಿ ಉಂಟಾದ ಭೀಕರ ಕ್ಷಾಮ ತಲೆದೋರಿದಾಗ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆಕಟ್ಟೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಮುಂದಾದರು. ಈ ಯೋಜನೆಗೆ 1890ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ನಮ್ಮ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದರು. ಇದರ ಫಲವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು. ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.

ಎಲ್ಲಿಯ ವೇದಾವತಿ, ಅದೆಲ್ಲಿಯ ಕಾವೇರಿ..?
ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ಪ್ರದೇಶವಿದೆ. ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನಕ್ಕೊಳಗಾಗಿತ್ತು. ಇಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಅಗತ್ಯ. ಈ ಕಾರಣ ಮುಂದಿಟ್ಟು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.

1924ರಲ್ಲಿ ಎರಡನೇ ಒಪ್ಪಂದ ಯಾಕೆ ನಡೆಯಿತು?
1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಮೈಸೂರು ಸಂಸ್ಥಾನ ಕೆಲಸ ಮುಂದುವರೆಸಿತು. ಆದರೂ 1892ರ ಒಪ್ಪಂದದಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿತು. ಬ್ರಿಟಿಷರು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ಪ್ರಾಂತ್ಯ ಲಂಡನ್‍ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್‍ಗೆ ಮೇಲ್ಮನವಿ ಸಲ್ಲಿಸಿತು. ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲವಾದರೂ 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು.

1924ರ ಒಪ್ಪಂದದಲ್ಲಿ ಏನಿತ್ತು?
ಈ ಒಪ್ಪಂದ ಪ್ರಕಾರ ಕಾವೇರಿ ಜಲನಯದ ಪ್ರದೇಶದಲ್ಲಿ ಒಟ್ಟು 868 ಟಿಎಂಸಿ ನೀರು ಲಭ್ಯವಿದೆ ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನದಂತೆ ಶೇ.75ರಷ್ಟು ಭಾಗ(651 ಟಿಎಂಸಿ) ತಮಿಳುನಾಡು ಮತ್ತು ಪುದುಚೇರಿಗೆ, ಕರ್ನಾಟಕಕ್ಕೆ ಶೇ.23(200 ಟಿಎಂಸಿ) ಕೇರಳಕ್ಕೆ ಶೇ.2(17.36) ಟಿಎಂಸಿ ನೀರನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಅಷ್ಟೇ ಅಲ್ಲದೇ ಕೆಆರ್‍ಎಸ್ ನಿರ್ಮಾಣಕ್ಕೆ ಮದ್ರಾಸ್ ಪ್ರಾಂತ್ಯ ವಿರೋಧ ವ್ಯಕ್ತಪಡಿಸಿದ ಕಾರಣ ಮೆಟ್ಟೂರಿನಲ್ಲಿ ಕಾವೇರಿಗೆ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಿತು. ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ಈ ವೇಳೆ ನಿರ್ಬಂಧಗಳನ್ನು ವಿಧಿಸಿತ್ತು. ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು ಎನ್ನುವ ಷರತ್ತನ್ನು ವಿಧಿಸಲಾಗಿತ್ತು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರಿನಲ್ಲಿ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು.

ತಮಿಳುನಾಡಿನಿಂದ ಒಪ್ಪಂದ ಬ್ರೇಕ್
1924ರ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ತಮಿಳುನಾಡು ತನ್ನ ಕರಾರನ್ನು ಮೀರಿ 18 ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಅಷ್ಟೇ ಅಲ್ಲದೇ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು. ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು. ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ಸರ್ಕಾರ ನ್ಯಾಯಾಲಯಕ್ಕೆ ಹೋಯಿತು. ಆದರೆ 3 ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಪ್ರಕರಣವನ್ನು ಹಿಂಪಡೆಯಲಾಯಿತು.

ಇದನ್ನೂ ಓದಿ: ಕಾವೇರಿಗಾಗಿ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ವಕೀಲರಿಗೆ ಕೊಟ್ಟಿದ್ದು ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

Click to comment

Leave a Reply

Your email address will not be published. Required fields are marked *

Advertisement