ಮಡಿಕೇರಿ: ಕನ್ನಡ ನಾಡಿನ ಜೀವನದಿ, ಕೊಡಗಿನ ಕಾವೇರಿ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗಿದ್ದು, ಸಾವಿರಾರು ಭಕ್ತರು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು.
Advertisement
ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವಾಗಿದೆ. ಮುಖ್ಯ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ 12 ಅರ್ಚಕರ ತಂಡ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ತೀರ್ಥೋದ್ಭವವಾಗಿದೆ. ಈ ಮೊದಲು ಬ್ರಹ್ಮಕುಂಡಿಕೆ ಬಳಿ ಪುಷ್ಪಾರ್ಚನೆ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿಗಳನ್ನು ನೆರವೇರಿಸಿದರು. ಪವಿತ್ರ ತೀರ್ಥ ಕುಂಡಿಕೆಯ ಸಮೀಪ ಪುಷ್ಪಲಂಕಾರ ಮಾಡಲಾಗಿತ್ತು. ತೀರ್ಥೋದ್ಭವದ ಬಳಿಕ ಸಹಸ್ರಾರು ಮಂದಿ ತೀರ್ಥ ಪಡೆದು ಪುನೀತರಾದರು. ಇದನ್ನೂ ಓದಿ: RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ
Advertisement
Advertisement
ತೀರ್ಥೋದ್ಭವದಲ್ಲಿ ಭಾಗವಹಿಸಲು ಎಲ್ಲಾ ಭಕ್ತರಿಗೆ ಮುಕ್ತ ಅವಕಾಶ ನೀಡಿರುವುದರಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಹೀಗಾಗಿ ಯಾವುದೇ ನೂಕು ನುಗ್ಗಲು ಆಗದಂತೆ ತಡೆಯುವುದಕ್ಕಾಗಿ ಜಿಲ್ಲಾಡಳಿತ ಬ್ಯಾರಿಕೇಡ್ ಗಳನ್ನು ಹಾಕಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಕೋವಿಡ್ ಇರುವುದರಿಂದ ತೀರ್ಥ ಕುಂಡಿಕೆಯ ಪಕ್ಕದಲ್ಲೇ ಇರುವ ಪವಿತ್ರ ಕೊಳದಲ್ಲಿ ಯಾರಿಗೂ ಹೋಗಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಅಲ್ಲಿ ಪುಣ್ಯ ಸ್ನಾನಕ್ಕೂ ಅವಕಾಶ ನಿರಾಕರಿಸಲಾಗಿತ್ತು.
Advertisement
ದೊಡ್ಡ ಕೊಳಾಯಿಗಳನ್ನು ಇರಿಸಿ ಅಲ್ಲಿಂದಲೇ ಎಲ್ಲಾ ಭಕ್ತರಿಗೆ ತೀರ್ಥ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ತಲಕಾವೇರಿಗೆ ಬರುವ ಭಕ್ತರಿಗೆ ಕೊಡಗು ಏಕೀಕರಣ ರಂಗವು ಪ್ರತೀ ವರ್ಷದಂತೆ ಈ ವರ್ಷವೂ ಊಟದ ವ್ಯವಸ್ಥೆ ಮಾಡಿತ್ತು. ತೀರ್ಥೋದ್ಭವದ ದಿನವಾದ ಭಾನುವಾರ ಮತ್ತು ಸೋಮವಾರ ಎರಡು ದಿನ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಆದರೆ ಕೋವಿಡ್-19 ಆತಂಕ ಇರುವುದರಿಂದ ಸೀಮಿತ ಜನರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ