ಮಡಿಕೇರಿ: ಕಾವೇರಿ ನದಿ ಕೋಟ್ಯಂತರ ಜನರ ಬದುಕನ್ನ ಬಂಗಾರವಾಗಿಸಿರುವ ಜೀವದಾತೆ. ಆದೆ ಕರುನಾಡ ಜೀವನದಿಗೆ ಇದೀಗ ಒಡಲಲ್ಲೇ ಕಂಟಕ ಎದುರಾಗಿದೆ. ಕೋಟ್ಯಂತರ ಜನರ ಪಾಲಿಗೆ ಜೀವಜಲವಾಗಿರುವ ಕಾವೇರಿ ನೀರು ಎಲ್ಲಿ ವಿಷಜಲವಾಗುತ್ತದೋ ಎನ್ನುವ ಭಯ ಆರಂಭವಾಗಿದೆ.
ಹೌದು, ಇದೀಗ ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಪಲ್ಪರ್ ನಡೆಯುತ್ತಿದ್ದು, ಕೆಲವು ಕಾಫಿ ತೋಟದ ಮಾಲೀಕರು ಅದರಿಂದ ಬರುವ ತ್ಯಾಜ್ಯವನ್ನ ನೇರವಾಗಿ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇದರಿಂದ ತಲಕಾವೇರಿಯಿಂದ ಪರಿಶುದ್ಧವಾಗಿ ಹರಿದು ಬರುವ ಕಾವೇರಿ, ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಬರುತ್ತಲೇ ಕಲುಷಿತಗೊಳ್ಳುತ್ತಿದ್ದಾಳೆ. ಈ ಭಾಗದಲ್ಲಿರೋ ಕಾಫಿ ತೋಟದ ಮಾಲೀಕರು ನೇರವಾಗಿ ಕಾಫಿ ಪಲ್ಪರ್ ನೀರನ್ನ ಕಾವೇರಿ ನದಿಗೆ ಬಿಡುತ್ತಿದ್ದಾರೆ.
Advertisement
Advertisement
ಕೆಲವು ಕಾಫಿ ತೋಟದ ಮಾಲೀಕರು ಪ್ರಭಾವಿಗಳಾಗಿರುವುದರಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಗ್ರಾಮ ಪಂಚಾಯತಿಯವರು ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಆರೋಪ ಕೂಡ ಇದೆ. ಹೀಗೆ ರಾಜರೋಷವಾಗಿ ಕಲುಷಿತ ನೀರು ಕಾವೇರಿ ನದಿಯನ್ನ ಸೇರುತ್ತಿದ್ದರೂ ಸಿದ್ದಾಪುರ ಗ್ರಾಮ ಪಂಚಾಯ್ತಿ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡರಾಗಿ ಏನೂ ಗೊತ್ತಿಲ್ಲದಂತೆ ಮೂಕ ಪ್ರೇಕ್ಷಕರಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರುಗಳ ಸುರಿಮಳೆಗೈದರೂ ಯಾವುದೇ ಪ್ರಯೋಜನವಾಗ್ತಿಲ್ಲ.
Advertisement
Advertisement
ಕೇವಲ ಕಾಫಿ ಪಲ್ಪರ್ ನೀರು ಮಾತ್ರವಲ್ಲದೇ ಇಡೀ ಗ್ರಾಮದ ಶೌಚಾಲಯದ ನೀರು ಇದರ ಜೊತೆಗೆ ಪ್ಲಾಸ್ಟಿಕ್ ಸೇರಿದಂತೆ ಕೆಲ ವಿಷತ್ಯಾಜ್ಯಗಳು ನದಿಯ ಒಡಲನ್ನ ನಿರಂತರವಾಗಿ ಸೇರುತ್ತಲೇ ಇದೆ. ಹೀಗೆ ಕಾವೇರಿ ಸಂಪೂರ್ಣ ವಿಷಮಯವಾಗ್ತಿದ್ದು, ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಡಗು ಜಿಲ್ಲಾಡಳಿತ ಇನ್ನಾದರೂ ಇತ್ತ ಗಮನಹರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಜೀವಜಲ ವಿಷಜಲವಾಗುತ್ತಿರುವುದನ್ನು ತಡೆಯಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv