– ಮೀಸಲಾತಿ ಹೆಚ್ಚಳಕ್ಕೆ ಆಯೋಗದ ಶಿಪಾರಸುಗಳನ್ನ ಅಧ್ಯಯನ ಮಾಡುತ್ತೇವೆ ಎಂದ ಸಚಿವ
ಬೆಂಗಳೂರು: ಜಾತಿಗಣತಿ ವರದಿ (Caste Census Report) ಯಾರ ಪರವಾಗಿಯೂ ಇಲ್ಲ. ವಿರೋಧವೂ ಇಲ್ಲ. ಸಂವಿಧಾನದ ಆಶಯದ ಪ್ರಕಾರ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಏ.17 ರಂದು ಮತ್ತೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ( H C Mahadevappa) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಶೈಕ್ಷಣಿಕ ಆರ್ಥಿಕ ಗಣತಿ ವರದಿ ಇದು. ಸಿಎಂ ಸಿದ್ದರಾಮಯ್ಯ ಅವರು ಸಮಿತಿ ರಚನೆ ಮಾಡಿದ್ದರು. ಸುಮಾರು 200 ಕೋಟಿ ರೂ. ಕೊಟ್ಟು ವರದಿ ಮಾಡಿಸಿದ್ದರು. ಪ್ರಣಾಳಿಕೆಯಲ್ಲೂ ಜಾತಿಗಣತಿಗೆ ಪಕ್ಷ ಬದ್ಧವಾಗಿತ್ತು. ಭಾರತ ದೇಶದಲ್ಲಿ ಜಾತಿಗಣತಿ ಮಾಡಲು ಕೆಲ ಪ್ರಯತ್ನ ಆಗಿತ್ತು. ಎಲ್ಲವನ್ನೂ ಕೂಲಂಕಶವಾಗಿ ಪರಿಗಣಿಸಿ ವರದಿ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ನನ್ನ ಮೇಲಿನ ಗುತ್ತಿಗೆದಾರರ ಎರಡೂ ಆರೋಪಗಳು ನಿರಾಧಾರ – ರವಿ ಬೋಸರಾಜು
ಸ್ವಾತಂತ್ರ್ಯ ಬಂದಾಗ 35 ಕೋಟಿ ಜನಸಂಖ್ಯೆ ಇತ್ತು. ಈಗ 140 ಕೋಟಿ ಜನಸಂಖ್ಯೆ ಆಗಿದೆ. ಅದರ ಆಧಾರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗಳನ್ನ ನೀಡಬೇಕು. ಯಾವ ಯಾವ ಸಮಾಜಕ್ಕೆ ಏನು ಸಿಗಬೇಕು ಅದನ್ನ ಕೊಡಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಯಾವ ಒತ್ತಡಕ್ಕೂ ಮಣಿಯದೆ ಜಾತಿಗಣತಿ ಜಾರಿ ಮಾಡಬೇಕು: ಪ್ರಣವಾನಂದ ಸ್ವಾಮೀಜಿ
ಮೀಸಲಾತಿ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿ, ಮೀಸಲಾತಿ ಹೆಚ್ಚಳಕ್ಕೆ ಆಯೋಗದ ಶಿಪಾರಸುಗಳನ್ನ ಅಧ್ಯಯನ ಮಾಡುತ್ತೇವೆ. ಇದೊಂದು ಪ್ರಗತಿಪರ ಅಧ್ಯಯನವಾಗಿದೆ. ಜನಸಂಖ್ಯೆ ಸ್ಫೋಟ ಆಗ್ತಿದೆ. ಹೀಗಾಗಿ ಎಲ್ಲ ಸಮುದಾಯಕ್ಕೆ ಅವಕಾಶ ಸಿಗಬೇಕು. ವೈಜ್ಞಾನಿಕವಾಗಿ ವರದಿ ಆಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳ ಪರ ಹಾಗೂ ಪೂರಕವಾಗಿದೆ ಎಂದರು. ಇದನ್ನೂ ಓದಿ: ಕಾಂತರಾಜುರನ್ನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ ಬರೆಸಿದ್ದಾರೆ – ಆರ್.ಅಶೋಕ್
ನಮ್ಮ ಕಾರ್ಯಕಾರಿ ಸಮಿತಿಯಲ್ಲೇ ಜೈ ಬಾಪು. ಜೈ ಭೀಮ್. ಜೈ ಸಂವಿಧಾನ ಅಂತಾ ಹೇಳಿದೆ. ಸಾಮಾಜಿಕ ನ್ಯಾಯದ ಪರವಾಗಿ ಕಾಂಗ್ರೆಸ್ ಪಕ್ಷವಿದೆ. ಸಂಪುಟ ಸಭೆಯಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ಮಾಡ್ತೇವಿ ಅಂದ್ರು. ಎಲ್ಲ ಸಂಗತಿಗಳನ್ನ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಅಭಿಪ್ರಾಯ ಹಾಗೂ ಸಲಹೆಗಳನ್ನು ಕೊಡಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ: ಸಿ.ಟಿ.ರವಿ ಪ್ರಶ್ನೆ
ಬಿಜೆಪಿಯವರು ದುರಾದೃಷ್ಟ ಅಂದಿರುವುದು. ಅದನ್ನ ಬಿಟ್ಟು ಬೇರೆ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಂಡಲ ಕಮಿಷನ್ ವರದಿ ಜಾರಿ ಆದಾಗ ಕಮಂಡಲ ಹಿಡಿದುಕೊಂಡು ಯಾತ್ರೆ ಮಾಡಿದ್ದರು. ಬಿಜೆಪಿಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ರಾಜಕೀಯ ಪ್ರಾತಿನಿಧ್ಯಕ್ಕೆ ಈ ವರದಿಗೂ ಸಂಬಂಧವಿಲ್ಲ. ಒಂದು ಸಮುದಾಯದಿಂದ ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡುವ ಉದ್ದೇಶ ಇದಲ್ಲ. ವರದಿಯಲ್ಲಿ ಏನಿದೆ ಎಂದು ಇನ್ನೂ ನೋಡದೇ ಮಾತನಾಡಬಾರದು. ಒಬ್ಬರನ್ನ ಹಿಂದಕ್ಕೆ ಹಾಕಿ ಇನ್ನೊಬ್ಬರಿಗೆ ಅನ್ಯಾಯ ಮಾಡುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟನೆ ನೀಡಿದರು.