ಬೆಂಗಳೂರು: ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜಾತಿಗಣತಿ ವರದಿ (Caste Census Report) ತಕ್ಷಣಕ್ಕೆ ಸಂಪುಟ ಸಭೆಯಲ್ಲಿ ಮಂಡನೆ ಆಗುವುದು ಅನುಮಾನವಾಗಿದೆ.
ಶುಕ್ರವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ(CM Siddaramaiah) ತಿಳಿಸಿದ್ದರು. ಆದರೆ ಈಗ ಉಪಚುನಾವಣೆಗೆ (By Election) ಮುಹೂರ್ತ ನಿಗದಿಯಾದ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹೊತ್ತಲ್ಲಿ ಯಾವುದೇ ನೀತಿ ನಿರೂಪಣೆ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಇಲ್ಲ. ಹೀಗಾಗಿ ಇಂದು ಕ್ಯಾಬಿನೆಟ್ ಸಭೆ (Cabinet Meeting) ನಡೆದಿಲ್ಲ.
ಜಾತಿಗಣತಿ ಕುರಿತ ಚರ್ಚೆಯೂ ಮುಂದಕ್ಕೆ ಹೋಗಿದೆ. ಅಕ್ಟೋಬರ್ 25ರಂದು ಸಂಪುಟ ಸಭೆ ನಿಗದಿ ಆಗಿದೆ. ಆದರೆ ಆ ಸಭೆಯಲ್ಲೂ ಜಾತಿಗಣತಿ ವಿಚಾರ ಚರ್ಚೆಗೆ ಬರುವುದು ಅನುಮಾನವಾಗಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್ ಗುರುತು ಪತ್ತೆ!
ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಗುರುವಾರ ರಾತ್ರಿ ಯಡಿಯೂರಪ್ಪ, ಬೊಮ್ಮಾಯಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಭಾನುವಾರ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ವರದಿಯನ್ನು ವಿರೋಧಿಸುತ್ತಿರುವ ಒಕ್ಕಲಿಗ ಮತ್ತು ಲಿಂಗಾಯತ ಶಾಸಕರ ಸಭೆ ಕರೆದಿದ್ದು, ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.