ಬೆಂಗಳೂರು: ನಾನು ಕೊಟ್ಟಿರೋ ವರದಿ ನೈಜವಾಗಿದೆ ಮತ್ತು ವೈಜ್ಞಾನಿಕವಾಗಿದೆ ಎಂದು ಜಾತಿಗಣತಿ ಸಿದ್ಧ ಮಾಡಿದ್ದ ಆಯೋಗದ ಅಧ್ಯಕ್ಷ ಕಾಂತರಾಜು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕೊಟ್ಟ ವರದಿ ನೈಜವಾಗಿ ಇದೆ. ವೈಜ್ಞಾನಿಕವಾಗಿ ಇದೆ. ವರದಿ ನೋಡದೇ ವರದಿ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ ಗಣತಿ ವೇಳೆ 55 ಪ್ರಶ್ನೆ ಕೇಳಿದ್ದೇವೆ. 40 ದಿನ ಸಮೀಕ್ಷೆ ಆದ ಮೇಲೆ ಕೂಲಂಕಷವಾಗಿ ಅಂಕಿಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದೆ. ವರದಿ ಈಗ ಸರ್ಕಾರದ ಆಸ್ತಿ. ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ ಎಂದಿದ್ದಾರೆ.
ವರದಿಗೆ ಒಕ್ಕಲಿಗರು, ಲಿಂಗಾಯತರು ವಿರೋಧ ವಿಚಾರಕ್ಕೆ ಮಾತನಾಡಿದ ಅವರು, ಎರಡು ಸಮುದಾಯಗಳು ವಿರೋಧ ಮಾಡಬಹುದು. ಆದರೆ ವರದಿ ಮೊದಲು ನೋಡಲಿ. ಆಮೇಲೆ ಅದು ಸರಿಯಿಲ್ಲ ಎಂದರೆ ವಿರೋಧ ಮಾಡಲಿ. ವರದಿ ನೋಡಿ ಅದರಲ್ಲಿ ಏನಾದರು ತಪ್ಪು ಇದ್ದರೆ ನಾನು ಒಪ್ಪಿಕೊಳ್ತೀನಿ. ಆಯೋಗದಲ್ಲಿ ಕಷ್ಟ ಪಟ್ಟು ವರದಿ ಮಾಡೋ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಅನ್ನೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಅನ್ನೋದು ಸರಿಯಲ್ಲ. ವರದಿಯಲ್ಲಿ ತುಂಬಾ ವಾಲ್ಯೂಮ್‌ಗಳು ಇವೆ. ಆದರೆ ಒಂದು ವಾಲ್ಯೂಮ್‌ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೂಲ ಪ್ರತಿ ಕಾಣೆ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೂಲ ಪ್ರತಿ ಕಾಣೆಯಾಗಿದೆ ಅನ್ನೋದು ನನಗೆ ಗೊತ್ತಿಲ್ಲ. ನಾನು ವರದಿ ಕೊಟ್ಟಿದ್ದು 2019ರಲ್ಲಿ. ನಾನು ಇದ್ದಾಗ ಮೂಲ ಪ್ರತಿ ಇತ್ತು. ಈಗ ಇಲ್ಲ ಅನ್ನೋದು ನನಗೆ ಗೊತ್ತಿಲ್ಲ. ಈಗ ನಾನು ಹೊರಗೆ ಇದ್ದು ಮಾತಾಡೋದು ಸರಿಯಲ್ಲ ಎಂದಿದ್ದಾರೆ.
ಇದು ಜಾತಿಗಣತಿ ಅಲ್ಲ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಅಂತ ಸ್ಪಷ್ಟಪಡಿಸಿದರು. ಹಲವು ಸಚಿವರು ವರದಿ ರಿಜೆಕ್ಟ್ ಮಾಡಬೇಕು ಎಂಬ ಪತ್ರ ಸಹಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ವರದಿ ಕೊಟ್ಟಿದ್ದೇನೆ. ಯಾರು ಬೇಕಾದ್ರು ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಅಂತ ಹೇಳಬಹುದು. ಆದರೆ ಮೊದಲು ವರದಿ ನೋಡಲಿ, ಆಮೇಲೆ ಯಾರು ಏನು ಬೇಕಾದ್ರು ಹೇಳಲಿ. ವರದಿ ನೋಡದೇ ಸರಿಯಿಲ್ಲ ಅನ್ನೋದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವಧಿಯಲ್ಲಿ ವರದಿ ಸ್ವೀಕಾರ ಮಾಡಲಿಲ್ಲವಾ ಎಂಬ ವಿಚಾರಕ್ಕೆ, ಕುಮಾರಸ್ವಾಮಿಗೆ ಅಪಾಯಿಂಟ್‌ಮೆಂಟ್ ಕೇಳಿದ್ವಿ. ಆದರೆ ಅವರು ಸಮಯ ಕೊಡಲಿಲ್ಲ ಅಂತ ತಿಳಿಸಿದರು. ಹಿಂದುಳಿದ ವರ್ಗಗಳ ಗಮನದಲ್ಲಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ. ಇದು ಕಾಂತರಾಜು ವರದಿನಾ? ಜಯಪ್ರಕಾಶ್ ಹೆಗ್ಡೆ ವರದಿನಾ ಎಂಬ ಪ್ರಶ್ನೆಗೆ ವರದಿ ಕೊಟ್ಟಿದ್ದು, ಸಮೀಕ್ಷೆ ಮಾಡಿದ್ದು ನಾವು. ಈಗ ಸರ್ಕಾರ ಏನಾದ್ರು ತೀರ್ಮಾನ ಮಾಡಬಹುದು. ಆದರೆ ನಾವು ಮಾಡಿದ ಕೆಲಸಕ್ಕೆ ಅವರ ವರದಿ ಅಂತ ಹೇಳೋಕೆ ಹೇಗೆ ಸಾಧ್ಯ. ಜನರು ಕೇಳೋ ಅನುಮಾನಗಳಿಗೆ ಈಗಿನ ಅಧ್ಯಕ್ಷರು ಹೇಗೆ ಉತ್ತರ ಕೊಡೋಕೆ ಸಾಧ್ಯ. ಈಗ ವರದಿ ಅವರು ರೆಡಿ ಮಾಡಿದ್ರೆ ನಾವು ಹೇಗೆ ಉತ್ತರ ಕೊಡೋಕೆ ಸಾಧ್ಯ. ಪರೋಕ್ಷವಾಗಿ ಕಾಂತರಾಜು ವರದಿ ಹೆಸರಿನಲ್ಲಿ ಇರಬೇಕು ಅಂತ ತಿಳಿಸಿದ್ದಾರೆ.