ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ನೌಕರರಿಗೆ ಸಾರಿಗೆ ಇಲಾಖೆ ಹೊಸ ವರ್ಷದ ಗಿಫ್ಟ್ ನೀಡಿದೆ. ನೌಕರರ 20 ವರ್ಷಗಳ ಬೇಡಿಕೆಯಾಗಿದ್ದ ನಗದು ರಹಿತ ಚಿಕಿತ್ಸಾ ಯೋಜನೆಗೆ ‘ಕೆಎಸ್‌ಆರ್‌ಟಿಸಿ ಆರೋಗ್ಯ’ ಇಂದು ಚಾಲನೆ ಸಿಕ್ಕಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದರು.
ಈ ಯೋಜನೆ ಅಡಿ ನೌಕರನ ಕುಟುಂಬದಲ್ಲಿ ತಂದೆ-ತಾಯಿ, ಹೆಂಡತಿ ಮಕ್ಕಳು ಎಲ್ಲರಿಗೂ ಚಿಕಿತ್ಸೆ ಸಿಗಲಿದೆ. ಯಾವುದೇ ಕಾಯಿಲೆ ಮತ್ತು ಎಷ್ಟೇ ಖರ್ಚಾದರೂ ಈ ಯೋಜನೆ ಅಡಿ ಚಿಕಿತ್ಸೆ ಸಿಗಲಿದೆ. ನೌಕರರು ಪ್ರತಿ ತಿಂಗಳು 650ರಂತೆ ವಾರ್ಷಿಕ 8 ಸಾವಿರ ರೂ. ಕಟ್ಟಬೇಕು. ಈ ಯೋಜನೆ ಅಡಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. 250 ಆಸ್ಪತ್ರೆಗಳು 24 ಡಯಾಗ್ನಸ್ಟಿಕ್ ಸೆಂಟರ್, 6 ಆಯುರ್ವೇದ ಆಸ್ಪತ್ರೆಗಳು ಈ ಯೋಜನೆ ಅಡಿ ಸರ್ಕಾರ ಎಮ್‌ಒಯು (MOU) ಮಾಡಿಕೊಂಡಿದೆ. ಇದನ್ನೂ ಓದಿ: ಗಟಾರ ಸ್ವಚ್ಛತೆಗೆ 200 ರೂ. ಕೇಳಿದ ಪಂಚಾಯತ್ – ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ ವೃದ್ಧ ದಂಪತಿ

ಯೋಜನೆ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದೊಂದು ಒಳ್ಳೆ ಕಾರ್ಯಕ್ರಮ. ಬಹಳ ದಿನದಿಂದ ಇದರ ಬೇಡಿಕೆ ಇತ್ತು. ಇಂದು ಜಾರಿ ಮಾಡಿದ್ದೇವೆ. ನೌಕರರು ಮತ್ತು ಅವರ ಕುಟುಂಬಗಳಿಗೂ ಅನ್ವಯ ಆಗಲಿದೆ, ಉಪಯೋಗ ಆಗಲಿದೆ. ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಕಾರ್ಡ್ ತೋರಿಸಿದರೆ ಚಿಕಿತ್ಸೆ ಕೊಡುತ್ತಾರೆ. ಏನೇ ಕಾಯಿಲೆ ಇದ್ದರೂ ಚಿಕಿತ್ಸೆ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಾಮರಾಜನಗರ | ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು
ಇದೇ ವೇಳೆ ನೊಂದಾಯಿತ ಆಸ್ಪತ್ರೆಗಳಿಗೆ ಸೂಚನೆ ನೀಡಿದ ಸಿಎಂ, ಯಾವುದೇ ಕಾರಣಕ್ಕೂ ತಿರಸ್ಕಾರದಿಂದ ನೌಕರರನ್ನು ನೋಡಬೇಡಿ. ಆಸ್ಪತ್ರೆಗಳಿಗೆ ನೌಕರರು ಬಂದ ಕೂಡಲೇ ಚಿಕಿತ್ಸೆ ಕೊಡಬೇಕು. ಹಣ ಕೊಡುವವರಿಗೆ ಹೇಗೆ ಚಿಕಿತ್ಸೆ ಕೊಡುತ್ತೀರೋ ನೌಕರರಿಗೂ ಚಿಕಿತ್ಸೆ ಕೊಡಬೇಕು ಎಂದು ತಾಕೀತು ಮಾಡಿದರು. ಇದನ್ನೂ ಓದಿ: 60% ಕಮೀಷನ್ ಆರೋಪಕ್ಕೆ ಹೆಚ್‌ಡಿಕೆ ದಾಖಲಾತಿ ಕೊಟ್ಟಿದ್ದಾರಾ? – ಸಿಎಂ ಪ್ರಶ್ನೆ
250 ಆಸ್ಪತ್ರೆಗಳ ಜೊತೆ ಒಡಂಬಡಿಕೆ ಆಗಿದೆ. ಮುಂದೆ ಇನ್ನು ಜಾಸ್ತಿ ಆಸ್ಪತ್ರೆ ಆಗಲಿದೆ. ಇಂದು ಕೆಎಸ್‌ಆರ್‌ಟಿಸಿಗೆ ಆಗಿದೆ. ಉಳಿದ 3 ನಿಗಮಗಳಿಗೆ ಯೋಜನೆ ಜಾರಿ ಮಾಡುತ್ತೇವೆ. 3 ತಿಂಗಳಲ್ಲಿ 3 ನಿಗಮಗಳಲ್ಲಿ ಯೋಜನೆ ಜಾರಿ ಆಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಮಹದೇವಪ್ಪ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ-ದಂಪತಿ ಸಮೇತ ಮಕ್ಕಳಿಗೆ ಗಾಯ
 


 
		 
		 
		 
		 
		
 
		 
		 
		 
		