– ನ್ಯಾ.ವರ್ಮಾ ನಿವಾಸದಲ್ಲಿ ನ್ಯಾಯಾಧೀಶರಿಂದ ಪರಿಶೀಲನೆ
ನವದೆಹಲಿ: ದೆಹಲಿ ಹೈಕೋರ್ಟ್ ( Delhi High Court) ಜಡ್ಜ್ ನ್ಯಾ.ಯಶವಂತ್ ವರ್ಮಾ (Yashwant Varma) ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ ಮೂವರು ಸದಸ್ಯರ ಸಮಿತಿ ಜಡ್ಜ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ದೆಹಲಿಯ ತುಘಲಕ್ ಕ್ರೆಸೆಂಟ್‌ನಲ್ಲಿರುವ ಜಡ್ಜ್ ನಿವಾಸಕ್ಕೆ ನ್ಯಾ.ಶೀಲಾ ನಾಗು (ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ), ನ್ಯಾ.ಜಿ.ಎಸ್. ಸಂಧವಾಲಿಯಾ (ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) ಮತ್ತು ನ್ಯಾ. ಅನು ಶಿವರಾಮನ್ (ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು) ಭೇಟಿ ನೀಡಿದ್ದಾರೆ. ಜಡ್ಜ್ ನಿವಾಸದಲ್ಲಿ ಸುಮಾರು 30-35 ನಿಮಿಷಗಳ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನ್ಯಾ.ಯಶವಂತ್ ವರ್ಮಾ ನ್ಯಾಯಾಂಗ ಕರ್ತವ್ಯ ನಿರ್ವಹಣೆ ಮಾಡುವಂತಿಲ್ಲ: ದೆಹಲಿ ಹೈಕೋರ್ಟ್
ಮಾ.14 ರಂದು ನ್ಯಾ.ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತ್ತು. ಈ ಸಮಯದಲ್ಲಿ ಅವರ ಮನೆಯ ಸ್ಟೋರ್ ರೂಂನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಅಗ್ನಿ ಅವಘಡದ ವೇಳೆ ನಾನು ಭೋಪಾಲ್‌ನಲ್ಲಿದ್ದೆ ಎಂದು ನ್ಯಾ.ವರ್ಮಾ ಹೇಳಿಕೊಂಡಿದ್ದರು.
ಸುಪ್ರೀಂ ಕೋರ್ಟ್ (Supreme Court) ಈ ಸಂಬಂಧ ಒಂದು ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಗದು ಪತ್ತೆಯಾದ ವೀಡಿಯೊ ಮತ್ತು 3 ಫೋಟೋಗಳು ಸಹ ಇದ್ದವು. ಈ ವೀಡಿಯೊ ಮತ್ತು ಫೋಟೋಗಳಲ್ಲಿ ಸುಟ್ಟ ಹಣದ ತುಂಡುಗಳನ್ನು ಸಿಬ್ಬಂದಿ ಹೊರತೆಗೆಯುತ್ತಿರುವುದನ್ನು ದಾಖಲಾಗಿತ್ತು.
ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ (Delhi High Court) ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಶುಕ್ರವಾರ ವರ್ಮಾ ಅವರಿಗೆ ಪತ್ರ ಬರೆದು, ನಗದು ಇರುವಿಕೆಯ ಬಗ್ಗೆ ಪ್ರತಿಕ್ರಿಯೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ.ವರ್ಮಾ ಅವರು, ನಾನು ಅಥವಾ ನನ್ನ ಕುಟುಂಬದ ಸದಸ್ಯರು ಆ ಕೋಣೆಯಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದಿದ್ದರು. ಇದನ್ನೂ ಓದಿ: ನಗದು ಪತ್ತೆ ಕೇಸ್ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ