ಕೋಲ್ಕತ್ತಾ: ಚೋರ್ಬಾಗನ್ನ (Chorbagan) ದುರ್ಗಾ ಪೂಜಾ ಪೆಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಪೊಲೀಸರು ದುರ್ಗಾ ಪೂಜಾ ಪೆಂಡಾಲ್ನ (Durga Puja Pandal) ಆಯೋಜಕರು ಸೇರಿದಂತೆ ಏಳು ಮಂದಿಯನ್ನ ಇಂದು ಬಂದಿಸಿದ್ದಾರೆ.
ಕಾಲ್ತುಳಿತ (Stampede) ದುರಂತಕ್ಕೆ ಸಂಬಂಧಿಸಿದಂತೆ ಗಿರೀಶ್ ಪಾರ್ಕ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105, 110 ಮತ್ತು 3(5) ರ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, 7 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ 48 ವರ್ಷದ ರಾಜ್ ಕುಮಾರ್ ಸೆವ್ಡಾ ಅಲಿಯಾಸ್ ರಾಜಾ (ಕಾರ್ಯದರ್ಶಿ), 55 ವರ್ಷದ ಸಂತನು ದುಬೆ (ಉಪಾಧ್ಯಕ್ಷ) ಮತ್ತು ಬಿದಿರಿನ ಪೆಂಡಾಲ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ 48 ವರ್ಷದ ಬಿಪ್ಲಬ್ ಮುಖರ್ಜಿ ಅಲಿಯಾಸ್ ಜಾಯ್ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಲ್ಲದೇ, ಜನಸಂದಣಿ ನಿಯಂತ್ರಿಸುವ ಮತ್ತು ವಿಐಪಿ (VIP) ಪಾಸ್ಗಳನ್ನು ಪರಿಶೀಲಿಸುವ ಕೆಲಸದಲ್ಲಿದ್ದ 53 ವರ್ಷದ ಕೌಶಿಕ್ ಸಹಾ ಮತ್ತು 51 ವರ್ಷದ ಪಿಂಟು ಡೇ, ಖಾಸಗಿ ಭದ್ರತಾ ವಿಭಾಗದ ಉಸ್ತುವಾರಿಗಳಾದ ಸುಮನ್ ಚಕ್ರವರ್ತಿ (30) ಮತ್ತು ರಾಜೇಶ್ ಪಾಲ್ (29) ನನ್ನ ಬಂಧಿಸಲಾಗಿದೆ. ಇದರೊಂದಿಗೆ 14 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತಕ್ಕೆ ನಿಖರ ಕಾರಣವೇನು ಅನ್ನೋದನ್ನ ಪತ್ತೆಹಚ್ಚಲು ವಿಚಾರಣೆ ಮುಂದುವರಿಸಿದ್ದೇವೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.

