ಬಾಗಲಕೋಟೆ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ.
ಸೋಲಾಪುರ್- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಹುನಗುಂದ ಪಟ್ಟಣದ ಸಾಯಿ ಮಂದಿರದ ಬಳಿ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸಿದೆ. ಪಂಕಜ್ ಸಿಂಗಿ (48), ಉಮಾಬಾಯಿ ಸಿಂಗಿ (48), ಪುಷ್ಪಾಬಾಯಿ ಧರಕ್ (62), ಹಾಗೂ ಶ್ರೀಕಾಂತಾಬಾಯಿ ಧರಕ್ (65) ಮೃತ ದುರ್ದೈವಿಗಳು.
ಅಪಘಾತದಲ್ಲಿ ದೀಪಕ್, ಸುನಿಲ್ ಹಾಗೂ ಶ್ರೀಧರ್ ಎಂಬ ಮೂವರಿಗೆ ಗಂಭೀರ ಗಾಯಗಳಾಗಿವೆ. ಮೃತರು ಹಾಗೂ ಗಾಯಗೊಂಡವರು ಬಾಗಲಕೋಟೆ ಪಟ್ಟಣದ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. ಇವರು ಬಳ್ಳಾರಿಯಿಂದ ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಚಾಲಕ ನಿದ್ದೆಗೆ ಜಾರಿದ್ದರಿಂದ ನಿಂತ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಬಾಗಲಕೋಟೆಯ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.