ಎಕ್ಸ್‌ಪ್ರೆಸ್‌ವೇನಲ್ಲಿ ರಾಂಗ್‌ ರೂಟ್‌ನಲ್ಲಿ ಬಂದ ಕಾರಿನಿಂದ ಭೀಕರ ಅಪಘಾತ – 6 ಮಂದಿ ಸ್ಥಳದಲ್ಲೇ ಸಾವು

Public TV
1 Min Read
Mumbai Nagpur Expressway Car Accident

ನವದೆಹಲಿ: ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇನಲ್ಲಿ (Mumbai Nagpur Expressway) ರಾಂಗ್‌ ರೂಟ್‌ನಲ್ಲಿ ಕಾರೊಂದು ಬಂದಿದ್ದರಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

ಮುಂಬೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ಜಲ್ನಾ ಜಿಲ್ಲೆಯ ಸಮೃದ್ಧಿ ಹೆದ್ದಾರಿಯ ಕಡ್ವಾಂಚಿ ಗ್ರಾಮದ ಬಳಿ ನಿನ್ನೆ ರಾತ್ರಿ ಮುಂಬೈ-ನಾಗ್ಪುರ ಎಕ್ಸ್‌ಪ್ರೆಸ್‌ವೇ ಅಥವಾ ಸಮೃದ್ಧಿ ಮಹಾಮಾರ್ಗ್‌ನಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಆರು ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: UGC-NET 2024: ಹೊಸ ದಿನಾಂಕ ಪ್ರಕಟಿಸಿದ ಎನ್‌ಟಿಎ

ರಾತ್ರಿ 11 ಗಂಟೆ ಸುಮಾರಿಗೆ ಸ್ವಿಫ್ಟ್ ಡಿಜೈರ್ ವಾಹನವು ಇಂಧನ ತುಂಬಿದ ನಂತರ ರಾಂಗ್ ಸೈಡ್‌ನಿಂದ ಹೆದ್ದಾರಿಗೆ ಪ್ರವೇಶಿಸಿ, ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತ ಎಷ್ಟು ತೀವ್ರವಾಗಿತ್ತೆಂದರೆ, ಎರ್ಟಿಗಾ ಕಾರು ಗಾಳಿಗೆ ಹಾರಿ ಹೆದ್ದಾರಿಯ ಬ್ಯಾರಿಕೇಡ್‌ ಮೇಲೆ ಬಿದ್ದಿತು. ಕಾರಿನಲ್ಲಿದ್ದವರು ರಸ್ತೆ ಮೇಲೆ ಬಿದ್ದರು. ಮತ್ತೊಂದು ಕಾರು ಡಿಕ್ಕಿ ರಭಸಕ್ಕೆ ಅಪ್ಪಚ್ಚಿಯಾಗಿತ್ತು. ಅಪಘಾತದ ಭೀಕರತೆಗೆ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಕ್ತಸಿಕ್ತ ಮೃತದೇಹಗಳು ಹೆದ್ದಾರಿಯಲ್ಲಿ ಬಿದ್ದಿರುವ ದೃಶ್ಯ ವೈರಲ್‌ ಆಗಿದೆ. ಇದನ್ನೂ ಓದಿ: ಗದಗ: ಆರೋಪಿ ಕರೆದೊಯ್ಯುವ ವೇಳೆ ಪೊಲೀಸರ ಮೇಲೆಯೇ ಅಟ್ಯಾಕ್

ಅಪಘಾತದ ಮಾಹಿತಿ ತಿಳಿದ ಕೂಡಲೇ ಸಮೃದ್ಧಿ ಹೆದ್ದಾರಿ ಪೊಲೀಸರು ಮತ್ತು ಜಲ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಾರುಗಳನ್ನು ತೆರವುಗೊಳಿಸಲು ಕ್ರೇನ್ ಕಾರ್ಯಾಚರಣೆ ನಡೆಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸಮೃದ್ಧಿ ಮಹಾಮಾರ್ಗ್ ಮಹಾರಾಷ್ಟ್ರದಲ್ಲಿ ಆರು-ಲೇನ್ ಮತ್ತು 701 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಮುಂಬೈ ಮತ್ತು ರಾಜ್ಯದ ಮೂರನೇ ಅತಿ ದೊಡ್ಡ ನಗರ ನಾಗ್ಪುರವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ಗ್ರೀನ್‌ಫೀಲ್ಡ್ ರಸ್ತೆ ಯೋಜನೆಗಳಲ್ಲಿ ಒಂದಾಗಿದೆ.

Share This Article