ಮುಂಬೈ: ಬಾರಾಮತಿಯಲ್ಲಿ ಅಜಿತ್ ಪವಾರ್ ಇದ್ದ ವಿಮಾನ ಪತನ (Baramati Plane Crash) ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಆ ದಿನ ವಿಮಾನ ಹಾರಿಸಬೇಕಿದ್ದ ಪೈಲಟ್ ಬೇರೆ, ಆದ್ರೆ ಪವಾರ್ ಜೊತೆಗೆ ಹೋದ ಪೈಲಟ್‌ಗಳೇ ಬೇರೆ ಅನ್ನೋದು ವರದಿಗಳಿಂದ ತಿಳಿದುಬಂದಿದೆ.
ಹೌದು. ಬುಧವಾರ (ಜ.28) ಅಜಿತ್ ಪವಾರ್ (Ajit Pawar) ಅವರು ಪ್ರಯಾಣಿಸಬೇಕಿದ್ದ ವಿಮಾನವನ್ನ ಕ್ಯಾಪ್ಟನ್ ಸುಮಿತ್ ಕಪೂರ್ (Sumit Kapoor) ಅವರು ಹಾರಿಸಬೇಕಿತ್ತು ಎಂದು ಕಪೂರ್ ಅವರ ಸ್ನೇಹಿತರು ತಿಳಿಸಿರೋದಾಗಿ ವರದಿಯಾಗಿದೆ. ಕಪೂರ್ ಮೂಲತಃ ಗುರುಗ್ರಾಮ್‌ನ ನಿವಾಸಿ, ಅವರ ಸಹೋದರ ಉದ್ಯಮಿ ಆಗಿದ್ದಾರೆ. ಕಪೂರ್ ಅವರ ಮಗ ಮತ್ತು ಅಳಿಯ ಇಬ್ಬರೂ ಪೈಲಟ್‌ಗಳಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹಾಂಗ್ ಕಾಂಗ್‌ನಿಂದ ಹಿಂದಿರುಗಿದ್ದ ಕಪೂರ್, ದುರಂತ ಸಂಭವಿಸೋದಕ್ಕೆ ಕೆಲವೇ ಗಂಟೆಗಳಿಗೂ ಮೊದಲು ಪವಾರ್ ಅವರೊಂದಿಗೆ ಬಾರಾಮತಿಗೆ ವಿಮಾನ ಹಾರಿಸಲು ಆದೇಶ ಪಡೆದಿದ್ದರು. ಆದ್ರೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಕಾರಣ, ಮತ್ತೊಬ್ಬರು ಪೈಲಟ್‌ಗೆ ಅವರು ಬದಲಿಯಾಗಿ ಕೆಲಸ ಮಾಡುವಂತೆ ಹೇಳಿದ್ದರು. ಒಂದು ವೇಳೆ ಕಪೂರ್ ಅವರು ಆ ಸಂದರ್ಭದಲ್ಲಿ ಇದ್ದಿದ್ದರೆ, ದುರಂತ ಸಂಭವಿಸುವ ಸಾಧ್ಯತೆ ತೀರಾ ಕಡಿಮೆಯಿರುತ್ತಿತ್ತು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗೆ ಮುಂಚಿತವಾಗಿ ಪವಾರ್ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಹೀಗಾಗಿ ಬುಧವಾರ ಮುಂಬೈನಿಂದ ಬಾರಾಮತಿಗೆ ಹೊರಟಿದ್ದರು. ವಿಮಾನವು ಬೆಳಗ್ಗೆ 8:45 ಕ್ಕೆ ಅಂತಿಮ ಹಂತದಲ್ಲಿ ತೀವ್ರ ತಾಂತ್ರಿಕ ತೊಂದರೆಗಳು ಮತ್ತು ಅಸ್ಥಿರತೆಯನ್ನು ಎದುರಿಸಿತು. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುವಾಗ ಪೈಲಟ್ ನಿಯಂತ್ರಣ ಕಳೆದುಕೊಂಡರು. ಇದರಿಂದಾಗಿ ವಿಮಾನವು ರನ್‌ವೇಯಲ್ಲಿಯೇ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಮೃತಪಟ್ಟ ಇತರರಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಪ್ರಯಾಣಿಕರು ಸೇರಿದ್ದಾರೆ. ಅವರಲ್ಲಿ ಒಬ್ಬ ಸಹಾಯಕ ಮತ್ತು ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಸೇರಿದ್ದಾರೆ.

ಇನ್ನೂ ಅಪಘಾತದ ಪ್ರಾಥಮಿಕ ತನಿಖೆಯಲ್ಲಿ ಕಳಪೆ ಗೋಚರತೆ ನಡುವೆ ಲ್ಯಾಂಡಿಂಗ್ ಮಾಡುವ ಪೈಲಟ್‌ನ ತಪ್ಪು ನಿರ್ಣಯ ಕಾರಣ ಎಂಬುದನ್ನು ಎತ್ತಿ ತೋರಿಸಿದೆ. ಅಲ್ಲದೇ ವಿಮಾನ ಭೂಮಿ ಕಡೆಗೆ ಬರುತ್ತಿದ್ದಂತೆ ಎಡಕ್ಕೆ ವಾಲಿರುವ ವಿಡಿಯೋ ಕಂಡುಬಂದಿದ್ದು, ತಾಂತ್ರಿಕ ದೋಷದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

