ಲಕ್ನೋ: ನಮ್ಮ ‘ಜನ್ ನೀತಿ ಭಾರತ್’ ಪಕ್ಷದಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ (Divya Mittal) ತಿಳಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಲ್ಲಿ 403 ಸ್ಥಾನಗಳಿವೆ.
ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿರುವ ಮಿತ್ತಲ್, ಮಿರ್ಜಾಪುರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ನಿಷಾದರಾಜನ ಪ್ರತಿಮೆಗೆ ಹಾರವನ್ನೂ ಹಾಕಿದರು. ಇದನ್ನೂ ಓದಿ: ದೀಪಾವಳಿಗೆ `ವೋಕಲ್ ಫಾರ್ ಲೋಕಲ್’ ಅಭಿಯಾನ ಬಲಪಡಿಸಿ: ಪ್ರಧಾನಿ ಮೋದಿ ಕರೆ
ನಾವು ಮಿರ್ಜಾಪುರದ ಚುನಾರ್ ಕ್ಷೇತ್ರದಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ನನಗೆ ನಿಮ್ಮ ಬೆಂಬಲ ಬೇಕು. ನಮಗೆ ಪ್ರಬಲರು ಸಿಗುವಂತಹ ಎಲ್ಲಾ 403 ಕ್ಷೇತ್ರಗಳಲ್ಲೂ ಸ್ಪರ್ಧಿಗಳನ್ನು ನಿಲ್ಲಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಮಾಜಿ ಐಎಎಸ್ ಅಧಿಕಾರಿ, ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಕೆಲವೇ ವಾರಗಳಲ್ಲಿ ತಮ್ಮ ಹೊಸ ಪಕ್ಷವನ್ನು ಘೋಷಿಸಿದರು. ನೀತಿ ನಿರೂಪಣೆಯಲ್ಲಿ ಜನರನ್ನು ಕೇಂದ್ರಬಿಂದುವಾಗಿಸುವುದು ಮತ್ತು ಸರ್ಕಾರದ ಐದು ವರ್ಷಗಳ ಅವಧಿಯುದ್ದಕ್ಕೂ ಕೇವಲ ಚುನಾವಣಾ ದಿನದಂದು ಮಾತ್ರವಲ್ಲದೆ, ಸರ್ಕಾರವು ಜನರಿಗೆ ಹೊಣೆಗಾರರಾಗಿರುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ತಮ್ಮ ಪಕ್ಷವು ಗಮನಹರಿಸಲಿದೆ ಎಂದು ಮಾತನಾಡಿದ್ದಾರೆ.
ರಾಜಕೀಯವು ನಿಮ್ಮ ಮೇಲೆ ಆಳ್ವಿಕೆ ನಡೆಸುತ್ತದೆ. ಆದರೆ ‘ಜನ್ ನೀತಿ’ಯಲ್ಲಿ, ನೀವೇ ಆಳ್ವಿಕೆ ನಡೆಸುವವರಾಗುತ್ತೀರಿ ಎಂದು ದಿವ್ಯಾ ಮಿತ್ತಲ್ ಜನಪರ ಆಡಳಿತದ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಸೂತ್ರಧಾರಿಯನ್ನು ಮೊದಲು ಬಂಧಿಸಿ: ಜೋಶಿ ಆಗ್ರಹ
ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿನಿಯಾಗಿರುವ ಹಾಗೂ ಹಿಂದೆ ವಾಲ್ ಸ್ಟ್ರೀಟ್ನಲ್ಲಿ ಟ್ರೇಡರ್ ಆಗಿ ಕೆಲಸ ಮಾಡಿದ್ದ ಮಿತ್ತಲ್, 13 ವರ್ಷಗಳ ಐಎಎಸ್ (IAS) ಸೇವೆಯ ನಂತರ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದರು. ಜನರು ರಾಜಕೀಯಕ್ಕೆ ಬರಬೇಕೆಂದು ತಾವು ನೀಡಿದ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
