ಬೆಂಗಳೂರು: ಮುಸ್ಲಿಮರಿಗೆ (Muslims) 2ಬಿ ಕೆಟಗರಿಯಲ್ಲಿ ನೀಡಲಾಗುತ್ತಿದ್ದ 4% ಮೀಸಲಾತಿಯನ್ನು(Reservation) ರದ್ದುಪಡಿಸಿದ ರಾಜ್ಯ ಬಿಜೆಪಿ (BJP) ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಪಾಲರಿಗೆ (Governor) ದೂರು ನೀಡಲು ಎಎಪಿ (AAP) ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದುದ್ದೀನ್ ಷರೀಫ್ ಮಾತನಾಡಿ, ಮುಸ್ಲಿಮರಿಗಿದ್ದ 2ಬಿ ಮೀಸಲಾತಿಯನ್ನು ಯಾರೂ ಕೂಡ ಪ್ರಶ್ನಿಸಿರಲಿಲ್ಲ. ಇದನ್ನು ರದ್ದು ಪಡಿಸಬೇಕೆಂದು ನ್ಯಾಯಾಲಯದ ಆದೇಶ ಕೂಡ ಇಲ್ಲ. ಆದರೂ ರಾಜ್ಯ ಸರ್ಕಾರ ಯಾವುದೇ ಮುನ್ಸೂಚನೇ ನೀಡದೇ, ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಮೀಸಲಾತಿ ರದ್ದು ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆ – ಡಿ.ಕೆ.ಸುರೇಶ್
ಮುಂದುವರೆದು ಮಾತನಾಡಿ, ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ, ಮುಸ್ಲಿಮರನ್ನು ಕೆರಳಿಸಿ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದೆ. ಚುನಾವಣೆ (Election) ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಸ್ಲಿಂ ಸಮುದಾಯ ಹಿಂದುಳಿದಿದೆ. ಅಲ್ಪಸಂಖ್ಯಾತ ಸಮುದಾಯವೆಂಬ ಕಾರಣಕ್ಕೆ ಮುಸ್ಲಿಮರ ಮೇಲೆ ಶೋಷಣೆ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮೀಸಲಾತಿ ರದ್ದು ಪಡಿಸಿರುವುದು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ಮೀಸಲಾತಿ ಪಡೆಯುವುದು ಮುಸ್ಲಿಮರ ಸಾಂವಿಧಾನಿಕ ಹಕ್ಕಾಗಿದೆ. ಇಡಬ್ಲ್ಯುಎಸ್ ಬದಲು 2ಬಿ ಕೆಟಗರಿಯನ್ನು ಮುಂದುವರಿಸಬೇಕು. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಿ, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಫರೀದುದ್ದೀನ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್