ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸುತ್ತಾ ಶಾಹಿನ್ ಬಾಗ್ ಪ್ರತಿಭಟನೆ?

Public TV
3 Min Read
Shaheen Bagh protest delhi 9

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಹತ್ತು ದಿನಗಳು ಬಾಕಿ ಉಳಿದಿದೆ. ಪ್ರಚಾರ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ. ದೆಹಲಿಯಲ್ಲಿ ಮೋದಿ ವಸರ್ಸ್ ಕೇಜ್ರಿವಾಲ್ ಹೋರಾಟ ತೀವ್ರವಾಗಿದೆ. ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಅಭಿವೃದ್ಧಿ ಅಜೆಂಡಾ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿ ಮೋದಿ ಜನಪ್ರಿಯತೆ, ಸಿಎಎ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ಗುಣಮಟ್ಟದ ಶಿಕ್ಷಣ, ಉಚಿತ ನೀರು, ವಿದ್ಯುತ್, ವೈದ್ಯಕೀಯ ಸೇವೆ, ಮಹಿಳೆಯರಿಗೆ ಉಚಿತ ಪ್ರಯಾಣ ವಿಚಾರವನ್ನು ಇಟ್ಟುಕೊಂಡು ಅಬ್ಬರದ ಪ್ರಚಾರ ನಡೆಸುತ್ತಿದೆ. ಆಪ್ ಅಬ್ಬರದ ಪ್ರಚಾರಕ್ಕೆ ಪರ್ಯಾಯ ಹುಡುಕುತ್ತಿರುವ ಬಿಜೆಪಿ ಇಂಡಿಯಾ ವರ್ಸಸ್ ಪಾಕಿಸ್ತಾನ ಅಜೆಂಡಾ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟಾರ್ಗೆಟ್ ಮಾಡಲು ಆರಂಭಿಸಿ ತಿರುಗೇಟು ನೀಡಲು ಆರಂಭಿಸಿದೆ.

Shaheen Bagh protest delhi 8

ಕಳೆದ ಎರಡು ದಿನಗಳಿಂದ ದೆಹಲಿ ಚುನಾವಣೆಯಲ್ಲಿ ಶಾಹಿನ್ ಬಾಗ್ ಪ್ರತಿಭಟನೆ ಚುನಾವಣಾ ವಿಷಯ ವಸ್ತುವಾಗಿದೆ. ಕಳೆದ 44 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಹಿಳೆಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಮೂಲೆಯೊಂದರಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ದೆಹಲಿಯಲ್ಲಿ ಹೊಸ ಸಂಚಲವೊಂದನ್ನ ಸೃಷ್ಟಿಸಿದೆ.

ಇದೇ ವಿಚಾರವನ್ನು ಚುನಾವಣೆ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ತೀಕ್ಷ್ಣ ರಾಜಕೀಯ ಪ್ರಚಾರಕ್ಕೆ ಮುಂದಾಗಿದೆ. ಶಾಹಿನ್ ಬಾಗ್ ಉದ್ದೇಶಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಹಾಕುವ ಮತ ದೆಹಲಿ ಮತ್ತು ದೇಶವನ್ನು ಸುರಕ್ಷಿತವಾಗಿಡಲಿದೆ. ಶಾಹಿನ್ ಬಾಗ್ ನಂತಹ ಸಾವಿರಾರು ಪ್ರತಿಭಟನೆಗಳು ತಡೆಯುವ ಶಕ್ತಿ ನಿಮ್ಮ ಮತಕ್ಕಿದೆ ಎನ್ನುವ ಮೂಲಕ ಪ್ರಚಾರಕ್ಕೆ ಶಾಹಿನ್ ಬಾಗ್ ಪ್ರತಿಭಟನೆಯನ್ನು ಎಳೆದು ತಂದಿದ್ದರು.

Modi AmitShah

ಇದರ ಬೆನ್ನಲ್ಲೇ ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಪ್ರತಿಭಟನೆಯ ಹೆಸರಿನಲ್ಲಿ ತುಕ್ಡೆ ತುಕ್ಡೆ ಗ್ಯಾಂಗ್ ಗಳಿಗೆ ವೇದಿಕೆ ನೀಡಲಿದೆ. ಇದು ಸಿಎಎ ವಿರುದ್ಧದ ಪ್ರತಿಭಟನೆಯಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ, ಸಿಎಂ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶ ಒಡೆಯುವ ಕಂಪನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ ಟ್ವೀಟ್ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾರತವನ್ನು ತುಂಡು ತುಂಡು ಮಾಡುವವರ ಪರವಾಗಿದ್ದಾರೆ ಕೇಜ್ರಿವಾಲ್ ಎಂದು ಆರೋಪಿಸಿದ್ದರು.

ಹಿರಿಯ ನಾಯಕರ ಬೆನ್ನಲ್ಲೇ ಕಿರಿಯರೂ ನಾವು ಕಮ್ಮಿಯಿಲ್ಲ ಎನ್ನುವಂತೆ ಮತ್ತಷ್ಟು ಉಗ್ರವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮನೀಶ್ ಚೌಧರಿ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಿ ಎನ್ನುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮಾವೇಶದಲ್ಲಿ ತಮ್ಮ ಕೈಗಳನ್ನು ಮೇಲೆತ್ತಿ ದೇಶದ್ರೋಹಿಗಳನ್ನು ಎಂದು ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ನೆರೆದಿದ್ದ ಜನರು ಗೋಲಿಮಾರೋ (ಗುಂಡಿಕ್ಕಿ ಕೊಲ್ಲಿ) ಎಂದು ಆಕ್ರೋಶಭರಿತರಾಗಿ ಕೂಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

Shaheen Bagh protest delhi 4

ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಏನಾಯಿತೋ ಅದೇ ದೆಹಲಿಯಲ್ಲೂ ಆಗುವ ಸಂಭವ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮನೆಮನೆಗೆ ನುಗಿ ಹೆಣ್ಣುಮಕ್ಕಳನ್ನು, ಮಹಿಳೆಯರನ್ನು ಅತ್ಯಾಚಾರ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿವಾದಾತ್ಮಕವಾಗಿ ಭಾಷಣ ಮಾಡಿದ್ದು ಚುನಾವಣೆಯ ಹೊಸ್ತಿಲಿನಲ್ಲಿ ಇರುವಾಗಲೇ ಮತ್ತೆ ಚರ್ಚೆ ಜಾಸ್ತಿಯಾಗಿದೆ.

ದೆಹಲಿಯಲ್ಲಿ ಬಿಜೆಪಿಗೆ ಶೇ.30-34 ಓಟ್ ಬ್ಯಾಂಕ್ ಹೊಂದಿದೆ. ಪ್ರತಿ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುತ್ತಿದೆ. ಆದರೆ ಅದು ಶೇಕಡವಾರು ಮತಗಳು ಗೆಲುವಾಗಿ ಬದಲಾಗುತ್ತಿಲ್ಲ. ಈ ಬಾರಿ ಪ್ರಚೋದಕಾರಿ ಭಾಷಣಗಳ ಮೂಲಕ ಉಗ್ರ ಹಿಂದುತ್ವ ಮತ್ತು ಸಿಎಎ ಪರ ಮತಗಳನ್ನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಆಪ್ ಅಭಿವೃದ್ಧಿ ಜನಪ್ರಿಯತೆಯನ್ನು ಸೈಡ್ ಲೈನ್ ಮಾಡುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಪ್ ಅಭಿವೃದ್ಧಿ ಮೇಲೆ ಮತ ಕೇಳುವುದನ್ನು ಮುಂದುವರಿಸಿದ್ದು ಶಾಹಿನ್ ಬಾಗ್ ಪ್ರತಿಭಟನೆ ಹಾಗೂ ಸಿಎಎ ವಿಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಈ ಬೆಳವಣಿಗೆ ನೋಡಿದಾಗ ಶಾಹಿನ್ ಬಾಗ್ ಪ್ರತಿಭಟನೆ ದೆಹಲಿ ಚುನಾವಣಾ ಕಣದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಲಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

Share This Article