-ಎಸ್ಸಿ-ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣದ ಭವಿಷ್ಯ ಇಂದು ನಿರ್ಧಾರ!
ನವದೆಹಲಿ: ನಿವೃತ್ತಿಗೆ ಉಳಿದಿರುವ ಕೊನೆ ಆರು ದಿನಗಳಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಏಳು ಮಹತ್ವದ ತೀರ್ಪು ನೀಡಲಿದ್ದಾರೆ. ಮಂಗಳವಾರ ಎರಡು ಮಹತ್ವದ ತೀರ್ಪು ನೀಡಿರುವ ನ್ಯಾ.ದೀಪಕ್ ಮಿಶ್ರಾ ಇಂದು ಮೂರು ಮಹತ್ವದ ಪ್ರಕರಣಗಳ ಬಗ್ಗೆ ತೀರ್ಪು ಪ್ರಕಟಿಸಲಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಆಧಾರ್ ಯೋಜನೆಗೆ ಈಗ ಸಿಂಧುತ್ವದ ಪ್ರಶ್ನೆ ಎದುರಾಗಿದೆ. ಆಧಾರ್ ಯೋಜನೆ ಲಾಭವನ್ನು ಆಡಳಿತಾರೂಢ ಮೋದಿ ಸರ್ಕಾರ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದು, ಸರ್ಕಾರಿ ಯೋಜನೆಗಳ ಫಲಾನುಭವಿಗಳ ಪತ್ತೆ, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ಯೋಜನೆಗಳಿಗೆ ಆಧಾರ್ ನಂಬರ್ ಲಿಂಕ್ ಮಾಡುತ್ತಿದೆ.
ಹೀಗೆ ಆಧಾರ್ ಲಿಂಕ್ ಮಾಡೋದು ವ್ಯಕ್ತಿಯ ಖಾಸಗಿತನದ ಧಕ್ಕೆ ತರಲಿದೆ ಅಂತಾ ಆಧಾರ್ ಜೋಡಣೆ ವಿರೋಧಿಸಿ ಸುಪ್ರೀಂಕೋರ್ಟ್ ಗೆ 27 ಅರ್ಜಿ ದಾಖಲಾಗಿವೆ. 27 ಅರ್ಜಿಗಳ ಒಟ್ಟುಗೂಡಿಸಿ ದಾಖಲೆಯ 38 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಇಂದು ತೀರ್ಪು ನೀಡಲಿದೆ. ಆಧಾರ್ ಜೋಡಣೆ ಖಾಸಗಿತನದ ಧಕ್ಕೆಯೋ..? ಇಲ್ಲವೋ..? ಆಧಾರ್ ಸರ್ಕಾರಿ ಯೋಜನೆಗಳಿಗೆ ಕಡ್ಡಾಯ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇಂದು ತೀರ್ಪು ಹೊರ ಬರಲಿದೆ. ಈ ಮಹತ್ವದ ತೀರ್ಪು ಆಧಾರ್ ಭವಿಷ್ಯ ನಿರ್ಧರಿಸಿಲಿದ್ದು, ಇಡೀ ದೇಶವೇ ಸುಪ್ರೀಂ ತೀರ್ಪು ನತ್ತ ಎದುರು ನೋಡ್ತಿದೆ.
ಎಸ್ಸಿ ಮತ್ತು ಎಸ್ಟಿ ಬಡ್ತಿ ಮೀಸಲಾತಿ:
ಎಸ್ಸಿ ಮತ್ತು ಎಸ್ಟಿ ಬಡ್ತಿ ಮೀಸಲಾತಿ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪಾಗಿ ಉಳಿದಿರುವ ಎಂ.ನಾಗರಾಜು ಪ್ರಕರಣ ತೀರ್ಪು ಬದಲಾಗುತ್ತಾ ಅನ್ನೂ ಕುತೂಹಲ ಮೂಡಿದೆ. ಬಡ್ತಿ ಮೀಸಲಾತಿ ವಿಚಾರವಾಗಿ ಎಂ.ನಾಗರಾಜು ಪ್ರಕರಣದ ಬಗ್ಗೆ 2006 ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಲ್ಯಾಂಡ್ ಮಾರ್ಕ್ ಆಗಿದ್ದು ಇಡೀ ದೇಶವೇ ಈ ತೀರ್ಪು ನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ತೀರ್ಪು ಎಲ್ಲ ರಾಜ್ಯಗಳಿಗೆ ಅನ್ವಯ ಮಾಡಲು ಸಾಧ್ಯವಿಲ್ಲ ಎಂದಿದ್ದ ಬಿಹಾರ ಮತ್ತು ಈಶಾನ್ಯ ಭಾಗದ ರಾಜ್ಯಗಳು ತೀರ್ಪು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು.
ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ 2006 ರಲ್ಲಿ ನೀಡಿದ್ದ ತೀರ್ಪು ಮುಂದುವರಿಬೇಕಾ ಅಥಾವ ಏಳು ಜನರ ಸಾಂವಿಧಾನಿಕ ಪೀಠದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಬೇಕಾ ಎಂಬುದರ ಬಗ್ಗೆ ಮಹತ್ವದ ಇಂದು ತೀರ್ಪು ನೀಡಲಿದೆ. ಈ ತೀರ್ಪು ರಾಜ್ಯ ಸರ್ಕಾರಕ್ಕೆ ನಿರ್ಣಾಯಕವಾಗಿದ್ದು ಹಿಂದಿನ ತೀರ್ಪು ಪಾಲಿಸುವ ಸೂಚನೆ ಸುಪ್ರೀಂ ಕೋರ್ಟ್ ನೀಡಿದ್ರೆ ರಾಜ್ಯ ಸರ್ಕಾರ ಬಿ.ಕೆ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಲಿದೆ. ಒಂದು ವೇಳೆ ಏಳು ಜನರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾದಲ್ಲಿ ಹೆಚ್.ಡಿ.ಕೆ ಸರ್ಕಾರ ಬೀಸೊ ದೊಣ್ಣೆಯಿಂದ ಪಾರಾಗಲಿದೆ.
ಕಲಾಪಗಳ ನೇರ ಪ್ರಸಾರ:
ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡಲು ಅವಕಾಶ ನೀಡುವ ಕುರಿತು ಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ತನ್ನ ನಿಲುವು ಪ್ರಕಟಿಸಲಿದೆ. ಮಹತ್ವದ ಕೇಸುಗಳ ತೀರ್ಪನ್ನು ನೀಡುವಾಗ ಅವುಗಳನ್ನು ನೇರ ಪ್ರಸಾರ ಮಾಡಬೇಕು ಅನ್ನೋ ಒತ್ತಾಯವಿದೆ. ಜತೆಗೆ ಕೋರ್ಟ್ ನಲ್ಲಿ ನಡೆಯುವ ಪ್ರಮುಖ ವಿಚಾರಣೆಗಳು ದೇಶದ ಜನತೆಗೆ ಗೊತ್ತಾಗಬೇಕು. ಗೊತ್ತಾವುದರಲ್ಲಿ ತಪ್ಪೇನಿದೆ ಅನ್ನುವ ವಾದಗಳು ಮಾಡಲಾಗಿದೆ. ಕೋರ್ಟ್ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕು ಅನ್ನೊ ವಾದಕ್ಕೆ ಮನ್ನಣೆ ಕೊಡಬೇಕೋ ಬೇಡವೋ ಎಂಬ ಬಗ್ಗೆ ಇಂದು ನ್ಯಾ.ದೀಪಕ್ ಮಿಶ್ರ ನೇತೃತ್ವದ ಪೀಠ ನಿರ್ಧರಿಸಲಿದೆ. ಇಂದು ಕೂಡಾ ಸುಪ್ರೀಂಕೋರ್ಟ್ ಕುತೂಹಲದ ಕೇಂದ್ರ ಬಿಂದುವಾಗಿದ್ದು, ಮೂರು ಮಹತ್ವದ ತೀರ್ಪುಗಳು ಸುಪ್ರೀಂಕೋರ್ಟ್ ನಿಂದ ಹೊರಬೀಳಲಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv