ಹುಬ್ಬಳ್ಳಿ: ಸಿದ್ರಾಮುಲ್ಲಾಖಾನ್ ಅಂತ ಸಿದ್ದರಾಮಯ್ಯ (Siddaramaiah) ಅವರನ್ನು ಕರೆದರೆ ಹಿಂದೂ (Hindu) ಧರ್ಮಕ್ಕೆ ಅವಮಾನ ಮಾಡಿದಂತೆ. ನಾನು ಹಿಂದೂ ಆದರೆ ನೀನು ಹಿಂದೂ ಅಲ್ಲ ಎನ್ನುವವರೆಲ್ಲಾ ಡೋಂಗಿ ಹಿಂದೂಗಳು ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ (Madhu Bangarappa) ಪರೋಕ್ಷವಾಗಿ ಬಿಜೆಪಿ (BJP) ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ (Hubballi) ಕಾಂಗ್ರೆಸ್ (Congress) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಜಾತಿ ಧರ್ಮದ ಮೇಲೆ ಮಾತ್ರ ರಾಜಕೀಯ ಮಾಡಿಕೊಂಡಿದ್ದಾರೆ. ಈವರೆಗೂ ಅವರು ಧರ್ಮ ಒಡೆಯುತ್ತಿದ್ದರು ಈಗ ಜಾತಿ ಒಡೆಯುತ್ತಿದ್ದಾರೆ ಎಂದರು.
ಬಿಜೆಪಿಯ ಕೆಟ್ಟ ನೀತಿಯಿಂದ ರೈತರಿಗೆ ಜಿಎಸ್‌ಟಿ ಹಾಕ್ತಿದ್ದಾರೆ. ಸಬ್ಸಿಡಿ ಇರೋ ಸೌಲಭ್ಯಗಳನ್ನು ನಿಲ್ಲಿಸಿದ್ದಾರೆ. ಎಲ್ಲಾ ಖರ್ಚು ಜಾಸ್ತಿಯಾಗುತ್ತಿದೆ, ಬೆಂಬಲ ಬೆಲೆ ಮಾತ್ರ ಕೊಡುತ್ತಿಲ್ಲ. ಖಾಸಗೀಕರಣ ಬಿಲ್ ಪಾಸ್ ಮಾಡಿದರು. ಉಚಿತ ವಿದ್ಯುತ್‌ಗೆ ಮುಂದೆ ಮೀಟರ್ ಕೂರಿಸುತ್ತಾರೆ. ಉಚಿತ ಭಾಗ್ಯಗಳನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಇಷ್ಟು ದಿನ ಧರ್ಮ ಒಡೆಯುತ್ತಿದ್ದರು, ಈಗ ರೈತರನ್ನು ಒಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ
ಭತ್ತ ಬೆಳೆಗಾರರಿಗೆ 500 ರೂ. ಸಹಾಯಧನ ಕೊಡುತ್ತಿದ್ದಾರೆ. ದಕ್ಷಿಣ ಕರ್ನಾಟಕದ ರೈತರಿಗೆ ಮಾತ್ರ ಕೊಟ್ಟು ಉತ್ತರ ಕರ್ನಾಟಕ ಭಾಗದ ರೈತರಿಗೆ ಕೊಡುತ್ತಿಲ್ಲ. ದೇಶದ ಎಲ್ಲಾ ರೈತರ ವಿರುದ್ಧ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖ್ಯ ಪ್ರಣಾಳಿಕೆ ಇರುತ್ತೆ, ಲೋಕಲ್ ಪ್ರಣಾಳಿಕೆ ಬೇರೆ ಇರುತ್ತದೆ. ಆಯಾಭಾಗದ ಅನುಗುಣವಾಗಿ ಪ್ರಣಾಳಿಕೆ ತಯಾರು ಮಾಡುತ್ತಿದ್ದಾರೆ. ಅವರ ಸಮಾವೇಶ ನೋಡಿದರೆ ಅವರು ಛಿದ್ರವಾಗಿದ್ದಾರಾ ಇಲ್ಲಾ ನಾವಾಗಿದ್ದೀವಾ ನೀವೇ ನೋಡಿ ಎಂದು ಗುಡುಗಿದರು.
ಭ್ರಷ್ಟಾಚಾರ ಹಣ ನೀಡಿ ಜನರಿಗೆ ಬಿರಿಯಾನಿ ತಿನ್ನಿಸಿದರೂ ಬಿಜೆಪಿ ಸಮಾವೇಶದಲ್ಲಿ ಖಾಲಿ ಚಯರ್ ಕಾಣಿಸುತ್ತಿವೆ. ಜನ ಕ್ಯಾಕರಿಸಿ ಉಗಿದಿದ್ದಾರೆ. ಶೇ.80 ರಷ್ಟು ಭ್ರಷ್ಟಾಚಾರ ಮಾಡಿದ ಹಣದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಮೋದಿ ಬಂದಾಗ ಜನರನ್ನು ಕರೆದು ಹಣ ಕೊಡಲಿಲ್ಲ. ಗ್ಯಾಸ್ ಸಿಲಿಂಡರ್‌ಗೆ ಹಿಂದೆ 300-400 ರೂ. ಇತ್ತು ಈಗ 1,200 ರೂ. ಆಗಿದೆ ಎಂದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ
ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹೆಜ್ಜೆ ಇಟ್ಟಿದ್ದಾರೆ ಹೊರತು ಧರ್ಮ ಒಡೆದಿಲ್ಲ. ಬಿಜೆಪಿಯವರು ಸಿಬಿಐಯನ್ನೇ ನಂಬಲ್ಲ ಎಂದರೆ ಮೋದಿಯವರನ್ನೂ ನಂಬಲ್ಲ ಎಂದೇ ಅರ್ಥ. ನಮ್ಮ ನಾಯಕರಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದೆ ಎಂಬುದನ್ನು ನಾನು ಒಪ್ಪಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಹೆಡ್ ಆಫ್ ದಿ ಫ್ಯಾಮಿಲಿ. ಅವರು ಕಾರ್ಯಕರ್ತರಲ್ಲಿ ಗೊಂದಲ ಆಗಬಾರದು ಎಂದು ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಿದ್ದಾರೆ ಎಂದು ತಿಳಿಸಿದರು.