ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ತಿಂಗಳಿಗೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಲಂಚದ ಹಣ ಸಂಗ್ರಹವಾಗುತ್ತೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಜೈಲಿನ ಅಧಿಕಾರಿಗಳಿಗೆ ಈ ಹಣ ತಲುಪಿಸುವವರು ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕ ಶಿವಕುಮಾರ್. ಪ್ರತಿಭಾ ಹತ್ಯೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶಿವಕುಮಾರ್‍ಗೆ ಪರಪ್ಪನ ಅಗ್ರಹಾರ ಜೈಲಲ್ಲಿ ವಸೂಲಿ ಮಾಡುವುದೇ ಕಾಯಕ.
Advertisement
Advertisement
ಶಿವಕುಮಾರ್ ಜೈಲಲ್ಲಿ ಊಟದ ವ್ಯವಸ್ಥೆ ಉಸ್ತುವಾರಿ ಹೊತ್ತಿದ್ದಾನೆ. ಜೈಲು ಅಧಿಕಾರಿಗಳಿಂದ ಹಂತಕ ಶಿವಕುಮಾರ್‍ಗೆ ಈ ಜವಾಬ್ದಾರಿ ನೀಡಲಾಗಿದೆ. ಯಾರನ್ನು ಎಲ್ಲಿ ನೇಮಿಸಬೇಕೆಂದು ನಿರ್ಧರಿಸುವವನೂ ಇವನೇ. ಒಬ್ಬ ಅತ್ಯಾಚಾರಿ ಅಪರಾಧಿಗೆ ಜೈಲಿನ ಸಂಪೂರ್ಣ ಹೊಣೆಯನ್ನ ನೀಡಲಾಗಿದೆ. ದಿನದ ಎಲ್ಲಾ ಲೆಕ್ಕಾಚಾರವನ್ನು ನೋಡಿಕೊಳ್ಳುವ ಶಿವಕುಮಾರ್ ರಾತ್ರಿ ಜೈಲಿನ ಅಧಿಕಾರಿಗಳಿಗೆ ಎಲ್ಲಾ ಮಾಹಿತಿ ನೀಡ್ತಾನೆ ಎನ್ನಲಾಗಿದೆ.
Advertisement
Advertisement
2005ರಲ್ಲಿ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಅವರನ್ನ ಕ್ಯಾಬ್ ಡ್ರೈವರ್ ಆಗಿದ್ದ ಶ್ರೀಕಾಂತ್ ಮಧ್ಯರಾತ್ರಿ ಪಿಕ್‍ಅಪ್ ಮಾಡಿದ ನಂತರ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ನಂತರ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಮಧ್ಯೆ ಜೈಲಿನ ಅಕ್ರಮಗಳ ಬಗ್ಗೆ ಉಪನಿರೀಕ್ಷಕಿ ರೂಪ ಅರೋಪ ಮಾಡಿದ ಮೇಲೆ ಇದೇ ಪ್ರಥಮ ಬಾರಿಗೆ ಡಿಜಿ ಸತ್ಯನಾರಾಯಣ್ ಜೈಲಿಗೆ ಭೇಟಿ ನೀಡಿದ್ದಾರೆ. ಶುಕ್ರವಾರದಂದು ಡಿಜಿ ಸತ್ಯನಾರಾಯಣ್ ಎಐಜಿ ವೀರಭದ್ರಸ್ವಾಮಿಗೆ ಜೈಲಿನ ಸ್ಥಿತಿಗತಿಯ ಬಗ್ಗೆ ತಿಳಿಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಎಐಜಿ ವೀರಭದ್ರಸ್ವಾಮಿ ಬೆಳಿಗ್ಗೆ 11 ಗಂಟೆಗೆ ಬಂದು ಸಂಜೆ 4:30 ತನಕ ಜೈಲಿನ ಸಂಪೂರ್ಣ ವಿವರ ಪಡೆದಿದ್ದರು. ಇಂದು ಬೆಳ್ಳಂಬೆಳಗ್ಗೆ ಡಿಜಿ ಸತ್ಯನಾರಾಯಣ್ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರ ಪಡೆದಿದ್ದಾರೆ.
ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ತನಿಖೆಗೆ ಆದೇಶಿಸಿದ್ದು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಆದರೆ ತನಿಖಾಧಿಕಾರಿಗಳು ಬರುವ ಮೊದಲೇ ಕಾರಗೃಹ ಡಿಜಿಪಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಶಶಿಕಲಾ, ತೆಲಗಿ ಅವರ ಸೆಲ್‍ಗಳನ್ನು ತಪಾಸಣೆ ನಡೆಸಿರಬಹುದು ಎಂಬ ಶಂಕೆ ಮುಡುತ್ತಿದೆ. ಸತ್ಯನಾರಾಯಣ್ ರಾವ್ ಹಳೇ ದಾಖಲೆಗಳ ಪರಿಶೀಲನೆ ನಡೆಸಿ ಕೆಳ ಹಂತದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ.