ಕೋಲ್ಕತ್ತಾ: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಫ್ರಾಂಚೈಸಿ ಪರ ಆಡುತ್ತಿರುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ (Abishek Porel) ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣದ ತನಿಖೆಯ ಭಾಗವಾಗಿ ಅಭಿಷೇಕ್ ಪೊರೆಲ್ ಅವರನ್ನ ತಕ್ಷಣವೇ ಬಂಧಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಅಲ್ಲದೇ, ದೂರುದಾರೆಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಅವರ ಬಳಿಯಿರುವ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನ ವಶಪಡಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದೆ.

ಏನಿದು ಕೇಸ್?
ಮದುವೆಯಾಗುವುದಾಗಿ (Marriage) ನಂಬಿಸಿ ಕಳೆದ 3 ವರ್ಷಗಳಿಂದ ದೂರುದಾರೆಯೊಂದಿಗೆ ಸಂಬಂಧ ಬೆಳೆಸಿದ್ದ ಅಭಿಷೇಕ್ ಪೊರೆಲ್, ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 2026ರ ಜೂನ್ ತಿಂಗಳ ಬಳಿಕ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಹಾಕಿರುವುದಾಗಿಯೂ ದೂರುದಲ್ಲಿ ಉಲ್ಲೇಖವಾಗಿದೆ. ಇದಲ್ಲದೇ ದೂರುದಾರೆಯ ಖಾಸಗಿ ಫೋಟೋಗಳು ಮತ್ತು ವಿಡಿಯೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆಂಬ ಗಂಭೀರ ಆರೋಪವೂ ಪೊರೆಲ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಹೂಗ್ಲಿ ಜಿಲ್ಲೆಯ ಮಗ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಭಿಷೇಕ್ ಪೊರೆಲ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು ಬಂಧನ ವಾರಂಟ್ ಹೊರಡಿಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಬಂಧನದ ಕುರಿತು ಸಮಗ್ರ ವರದಿಯನ್ನ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 11ರಂದು ನಡೆಯಲಿದೆ.

ಅಭಿಷೇಕ್ ಪೊರೆಲ್ ಕ್ರಿಕೆಟ್ ವೃತ್ತಿಜೀವನ ಹೇಗಿದೆ?
23 ವರ್ಷದ ಅಭಿಷೇಕ್ ಪೊರೆಲ್ ಇನ್ನೂ ಭಾರತ ರಾಷ್ಟ್ರೀಯ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಆದರೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪರ 4 ಆವೃತ್ತಿಗಳಲ್ಲಿ ಒಟ್ಟು 35 ಪಂದ್ಯಗಳನ್ನ ಆಡಿದ್ದಾರೆ. 25.63 ಸರಾಸರಿಯಲ್ಲಿ 769 ರನ್ ಗಳಿಸಿದ್ದಾರೆ. ಇದರೊಂದಿಗೆ ದೇಶೀಯ ಕ್ರಿಕೆಟ್‌ನಲ್ಲಿ 32 ಪ್ರಥಮ ದರ್ಜೆ ಪಂದ್ಯಗಳು ಹಾಗೂ 23 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿರುವ ಪೊರೆಲ್, ಕ್ರಮವಾಗಿ 1,408 ಮತ್ತು 833 ರನ್ ಗಳಿಸಿದ್ದಾರೆ. ಬಂಗಾಳ ತಂಡದ ಪ್ರಮುಖ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
