ಅಕ್ಬರ್‌, ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡಿ- ಕೋಲ್ಕತ್ತಾ ಹೈಕೋರ್ಟ್‌ ಸೂಚನೆ

Public TV
1 Min Read
LION AND LIONESS

ಕೋಲ್ಕತ್ತಾ: ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ (Bengal Safari Park in Siliguri) ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಇರಿಸಿದ ನಂತರ ವಿವಾದಕ್ಕೆ ಕಾರಣವಾದ ಅಕ್ಬರ್ ಮತ್ತು ಸೀತಾ ಸಿಂಹಗಳಿಗೆ ಮರುನಾಮಕರಣ ಮಾಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋಲ್ಕತ್ತಾ ಹೈಕೋರ್ಟ್ (Calcutta High Court) ಸೂಚಿಸಿದೆ.

calcutta high court

ತ್ರಿಪುರಾದಿಂದ ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ವರ್ಗಾವಣೆಗೊಂಡ ಸಿಂಹಗಳ ಹೆಸರನ್ನು ಬದಲಾಯಿಸುವಂತೆ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇಂದು ಕೈಗೆತ್ತಿಕೊಂಡಿತು. ಬಳಿಕ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಏಕಸದಸ್ಯ ಪೀಠವು ವಿವಾದದಿಂದ ದೂರವಿರಲು ಮತ್ತು ಪ್ರಾಣಿಗಳ ಮರುನಾಮಕರಣವನ್ನು ಪರಿಗಣಿಸುವಂತೆ ಮೌಖಿಕ ನಿರ್ದೇಶನ ನೀಡಿತು. ಇದನ್ನೂ ಓದಿ: ಹುಲಿ ಬೇಟೆಯಾಡಿ ಹಲ್ಲಿನ ಪೆಂಡೆಂಟ್‌ ಧರಿಸಿದ್ದೇನೆ- ವಿವಾದಕ್ಕೀಡಾದ ಶಾಸಕ

ನೀವು ಸಿಂಹಕ್ಕೆ ಹಿಂದೂ ದೇವತೆ, ಮುಸ್ಲಿಂ ಪ್ರವಾದಿ, ಕ್ರಿಶ್ಚಿಯನ್ ದೇವರು, ಸ್ವಾತಂತ್ರ್ಯ ಹೋರಾಟಗಾರ ಅಥವಾ ನೊಬೆಲ್ ಪ್ರಶಸ್ತಿ ವಿಜೇತರ ಹೆಸರನ್ನು ಇಡುತ್ತೀರಾ? ರಾಜ್ಯ ಸರ್ಕಾರ ಇದನ್ನು ಯಾಕೆ ಪ್ರಶ್ನಿಸಿಲ್ಲ. ಇದು ಜಾತ್ಯಾತೀತ ರಾಜ್ಯವಾಗಿದ್ದು, ಸೀತಾ ಮತ್ತು ಅಕ್ಬರ್ ಹೆಸರನ್ನು ಸಿಂಹಕ್ಕೆ ಹೆಸರಿಸಿ ವಿವಾದವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು? ಈ ವಿವಾದವನ್ನು ತಪ್ಪಿಸಬೇಕಾಗಿತ್ತು. ಸೀತೆ (Sita) ಮಾತ್ರವಲ್ಲ, ಅಕ್ಬರ್ (Akbar) ಹೆಸರನ್ನೂ ನಾನು ಬೆಂಬಲಿಸುವುದಿಲ್ಲ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ಛಾಟಿ ಬೀಸಿದರು.

LION

ಈ ವೇಳೆ ಪಶ್ಚಿಮ ಬಂಗಾಳ (West Bengal) ಸರ್ಕಾರದ ಪರ ವಕೀಲರು, ಈಗಾಗಲೇ ಸಿಂಹಗಳಿಗೆ ಮರುನಾಮಕರಣ ಮಾಡಲು ಯೋಚಿಸುತ್ತಿರುವುದಾಗಿ ತಿಳಿಸಿದರು. ಬಳಿಕ ಕೋರ್ಟ್‌, ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಪಿಐಎಲ್ ಎಂದು ಮರು ವರ್ಗೀಕರಿಸಲು ನಿರ್ದೇಶಿಸಿದೆ. ಜೊತೆಗೆ ಪಿಐಎಲ್‌ಗಳನ್ನು ಆಲಿಸುವ ಸಾಮಾನ್ಯ ಪೀಠಕ್ಕೆ ಮರುನಿರ್ದೇಶನ ನೀಡಿದೆ.

Share This Article