ಮಂತ್ರಿಗಿರಿಗಾಗಿ ಸ್ವಾಮೀಜಿಗಳ ಮೂಲಕ ಲಾಬಿ ಮಾಡಲ್ಲ, ಇಂದಲ್ಲ ನಾಳೆ ಸಿಎಂ ಆಗ್ತೇನೆ- ಯತ್ನಾಳ್

Public TV
2 Min Read
basanagouda patil yatnal

ಬಾಗಲಕೋಟೆ: ಮಂತ್ರಿಗಿರಿಗಾಗಿ ಯಡಿಯೂರಪ್ಪ ಸೇರಿದಂತೆ ಯಾರ ಮನೆಗೂ ಹೋಗಿಲ್ಲ, ಕಚೇರಿಗೂ ಹೋಗಿಲ್ಲ. ಅಲ್ಲದೆ ಯಾವುದೇ ಸ್ವಾಮೀಜಿಗಳ ಮೂಲಕ ಲಾಬಿ ಮಾಡಿಲ್ಲ. ಇನ್ನೊಂದು ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಿ ಎಂದು ಯಾರ್ಯಾದ್ದೋ ಕೈಕಾಲು ಹಿಡಿಯುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಹೈ ಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಮಂತ್ರಿಗಿರಿಗಾಗಿ ಯಾರಮನೆಗೂ ಹೋಗಿಲ್ಲ. ಯಡಿಯೂರಪ್ಪ ಮನೆಗೆ, ಕಚೇರಿಗೂ ಹೋಗಿಲ್ಲ. ಅಲ್ಲದೆ, ಯಾವುದೇ ಸ್ವಾಮೀಜಿಗಳ ಮೂಲಕ ಲಾಬಿನೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ಇನ್ನೊಂದು ಸಚಿವರ ಪಟ್ಟಿಯಲ್ಲಿ ಅವಕಾಶ ಸಿಗಬೇಕೆಂದು ಯಾರ್ಯಾರದ್ದೋ ಕೈಕಾಲು ಹಿಡಿದು ಕೇಳುವಷ್ಟು ತಳಮಟ್ಟದ ರಾಜಕಾರಣ ಮಾಡುವ ಸ್ವಭಾವ ನನ್ನದಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಯತ್ನಾಳ್‍ಗೆ ಭಗವಂತ ತಿದ್ದಿಕೊಳ್ಳುವ ಬುದ್ಧಿ ನೀಡಲಿ – ಈಶ್ವರಪ್ಪ ಕಿಡಿ

BSY Cabinet

ಈಗಾಗಲೇ ಸಚಿವರಾಗಬೇಕಾದಲ್ಲಿ ಯಾರ್ಯಾರೋ ಏನೇನೋ ಮಾಡಿರುತ್ತಾರೆ. ಪಕ್ಷ ಒಳ್ಳೆಯ ನಿರ್ಧಾರ ತಗೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಭಿನ್ನ ಮತದಂತಹ ಚಿಲ್ಲರೆ ಕೆಲಸ ಮಾಡುವವ ನಾನಲ್ಲ. ಮಂತ್ರಗಿರಿ ಕೊಟ್ಟರೆ ಕೆಲಸ ಮಾಡುತ್ತೇನೆ. ಇಲ್ಲದಿದ್ದಲ್ಲಿ ನಮ್ಮ ಕ್ಷೇತ್ರದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಸಿಎಂ ಆಗ್ತೇನೆ
ಈಗಿನ್ನೂ ನನಗೆ ವಯಸ್ಸು 54, 75 ಆಗಿಲ್ಲ. ರಾಜ್ಯದ ನಂಬರ್ ಒನ್ ಹುದ್ದೆಯನ್ನು ಏರುತ್ತೇನೆ, ಮುಖ್ಯಮಂತ್ರಿಯಾಗುತ್ತೇನೆ. ನನ್ನ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪವಿಲ್ಲ, ಯಾವುದೇ ಹಗರಣ ಮಾಡಿಲ್ಲ. ಹೀಗಿರುವಾಗ ನಾನೇಕೆ ಸಿಎಂ ಆಗಬಾರದು. ಹಿಂದುತ್ವದ ಪರವಾಗಿರುವ ಒಬ್ಬ ನಾಯಕ ಎಂದು ಜನ ಒಪ್ಪಿಕೊಂಡಿದ್ದಾರೆ. ಹೀಗಾಗಿ ನನ್ನ ಭವಿಷ್ಯ ನನಗಿದೆ. ಬಿಜೆಪಿಯನ್ನು ತಳಮಟ್ಟದಿಂದ ಬೆಳೆಸಿದವರಲ್ಲಿ ನಾನೂ ಒಬ್ಬ. ವಿಜಯಪುರದ ಬಿಜೆಪಿಯ ಮೊದಲ ಲೋಕಸಭಾ ಸದಸ್ಯ ನಾನು. ಈ ಹಿಂದೆ ಕೇಂದ್ರ ಮಂತ್ರಿಯಾದವನು. ಸದ್ಯ ಈಗ ಅಡ್ವಾಣಿ ಅವರ ಸ್ಥಿತಿ ರೀತಿ ನನಗೂ ಆಗಿದೆ. ಒಂದೊಂದು ಕಾಲದಲ್ಲಿ ಒಂದೊಂದು ಯುಗ. ಈ ಕುರಿತು ನನಗೆ ಯಾವುದೇ ಬೇಸರವಿಲ್ಲ ಎಂದರು.

eshwarappa 2 1

ಇಂದು ಬೆಳಗ್ಗೆ ಈಶ್ವರಪ್ಪನವರ ಪಕ್ಷದಲ್ಲೆ ಇದ್ದುಕೊಂಡು ಈ ರೀತಿ ಹೇಳುವುದು ಒಳ್ಳೆಯದಲ್ಲ ಎಂದು ಯತ್ನಾಳ್ ಮುಖಕ್ಕೆ ಹಲವು ಬಾರಿ ಹೇಳಿದ್ದೇನೆ. ಭಗವಂತ ಅವರಿಗೆ ತಿದ್ದಿಕೊಳ್ಳುವ ಬುದ್ಧಿ ಕೊಡಲಿ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರ ಬಗ್ಗೆ ನನಗೆ ಬಹಳ ಗೌರವವಿದೆ. ಅವರು ಬಿಜೆಪಿಯ ಹಿರಿಯ ನಾಯಕರು. ಅವರು ಯಾವಾಗಲೂ ನನಗೆ ಪ್ರೀತಿ ತೋರಿದ್ದಾರೆ, ತಪ್ಪಿದಾಗ ತಿದ್ದಿದ್ದಾರೆ. ಹೀಗಾಗಿ ಅವರು ಕರೆದು ಹೊಡೆದರೂ ನನಗೆ ಸಿಟ್ಟಿಲ್ಲ. ನಾನು ಅಡ್ವಾಣಿ, ಅಮಿತ್ ಶಾ, ಮೋದಿ, ಅನಂತ್ ಕುಮಾರ್ ಹಾಗೂ ಈಶ್ವರಪ್ಪನವರನ್ನು ಟೀಕಿಸಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *