ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಬಳಿಕ ಸಚಿವರಾಗುವ ಕನಸು ಕಾಣುತ್ತಿದ್ದ ನೂತನ ಶಾಸಕರು ಭ್ರಮನಿರಸನಗೊಂಡಿದ್ದಾರೆ. ಸಚಿವರಾಗುವ ಕನಸು ತಕ್ಷಣಕ್ಕೆ ಈಡೇರುತ್ತಿಲ್ಲ. ಇದರಿಂದ ನೂತನ ಶಾಸಕರಲ್ಲಿ ಬೇಸರ ಮನೆ ಮಾಡಿದೆ. ಅಸಮಧಾನಗೊಂಡ ನೂತನ ಶಾಸಕರ ಮನವೊಲಿಕೆಗೆ ಸಿಎಂ ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಸಂಕ್ರಾಂತಿಗೆ ಶತಾಯಗತಾಯ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಇದೀಗ ನೂತನ ಶಾಸಕರಿಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಸಂಪುಟಕ್ಕೆ ಎಲ್ಲ ನೂತನ ಶಾಸಕರನ್ನೂ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಸಿಎಂ ಈಗಾಗಲೇ ಭರವಸೆ ಕೊಟ್ಟಿದ್ದಾರೆ. ಆದರೆ ಸಂಪುಟ ವಿಸ್ತರಣೆ ಇವತ್ತಾಗಬಹುದು ನಾಳೆ ಆಗಬಹುದು ಅಂತ ಶಾಸಕರು ದಿನಗಳನ್ನು ಎಣಿಸುತ್ತಲೇ ಇದ್ದಾರೆ. ಪದೇ ಪದೇ ಸಿಎಂ ಯಡಿಯೂರಪ್ಪ ಭೇಟಿ ಮಾಡುತ್ತಾ ಸಂಪುಟ ಕುರಿತು ಚರ್ಚಿಸುತ್ತಾ ವಾಪಸ್ ಹೋಗುತ್ತಿದ್ದಾರೆ. ಈ ತಿಂಗಳಲ್ಲಿ ಸಂಪುಟ ವಿಸ್ತರಣೆ ನಡೆಯಬಹುದು ಅನ್ನುವ ವಿಶ್ವಾಸವೂ ಇದೀಗ ನೂತನ ಶಾಸಕರಲ್ಲಿ ಕಮರಿ ಹೋಗಿದೆ. ಹಾಗಾಗಿ ಎಲ್ಲ ಹೊಸ ಶಾಸಕರೂ ಅಸಮಧಾನಗೊಂಡಿದ್ದು ತೀವ್ರತರದ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
Advertisement
ನೂತನ ಶಾಸಕರು ಬೇಸರಗೊಂಡಿದ್ದಾರೆ ಎಂಬ ವಿಚಾರ ಗೊತ್ತಾಗಿದ್ದೇ ತಡ ಮುಖ್ಯಮಂತ್ರಿಗಳು ಈಗ ಅವರನ್ನು ಸಂತೈಸಲು ಮುಂದಾಗಿದ್ದಾರೆ. ನಾನು ಇದೇ ತಿಂಗಳ 21, 22 ರಂದು ದೆಹಲಿಗೆ ಹೋಗುತ್ತೇನೆ. ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಮಾಡುತ್ತೇವೆ. ಗೆದ್ದ ಎಲ್ಲ 11 ಶಾಸಕರನ್ನೂ ಮತ್ತು ಆರ್. ಶಂಕರ್ ರನ್ನೂ ಸಚಿವರಾಗಿ ಮಾಡ್ತೇವೆ. ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆಯೂ ಹೈಕಮಾಂಡ್ ಜೊತೆ ಮಾತಾಡ್ತೇನೆ. ನೀವ್ಯಾರೂ ಆತಂಕಗೊಳ್ಳಬೇಡಿ ಎಂದು ಯಡಿಯೂರಪ್ಪನವರು ನೂತನ ಶಾಸಕರಿಗೆ ಸಾಂತ್ವನ, ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.